ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲವೂ ಮಾಮೂಲಿಯಂತೆ ಇತ್ತು. ನಮ್ಮ ಮೆಟ್ರೋ ಇದ್ದಕ್ಕಿದ್ದಂತೆಯೇ ಟಿಕೆಟ್ ದರ ಏರಿಕೆ ಮಾಡಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ನಂತರ ಬೆಲೆ ಇಳಿಕೆ ಮಾಡಿದಂತೆ ತಕ್ಕ ಮಟ್ಟಿಗೆ ಮೆಟ್ರೋ ತನ್ನ ಬೆಲೆಯನ್ನು ಇಳಿಸಿದ್ದೇನೋ ನಿಜ, ಆದರೆ ಜನ ಇದನ್ನು ಈಗಲೂ ಒಪ್ಪಿಕೊಂಡಿಲ್ಲ. ಮೆಟ್ರೋ ಟಿಕೆಟ್ ದರ ಏರಿಕೆ ಹಿನ್ನೆಲೆ ಮೆಟ್ರೋ ಬಳಸುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.
ನಿತ್ಯವೂ ಎಂಟೂವರೆ ಲಕ್ಷ ಜನರನ್ನ ಹೊತ್ತು ಸಾಗುತ್ತಿದ್ದ ಮೆಟ್ರೋದ ಒಡಲು ಈಗ ಬರಿದಾಗಲು ಆರಂಭವಾಗಿದೆ. ಮೆಟ್ರೋದಲ್ಲಿ ಈಗ ಹಿಂದೆ ಇದ್ದಷ್ಟು ಇಕ್ಕಟ್ಟಿಲ್ಲ. ದರ ಏರಿಕೆಯ ಪರಿಣಾಮದಿಂದ ಜನರು ಇದೀಗ ಮೆಟ್ರೋದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವುಮೆನ್ ಪ್ರೀಮಿಯರ್ ಲೀಗ್ ಮ್ಯಾಚ್ ಹೊರತಾಗಿಯೂ, ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ಇಲ್ಲ. ಗುರುವಾರದಂದು ಆರ್ಸಿಬಿ ಹಾಗೂ ಗುಜರಾತ್ ನಡುವೆ ಪಂದ್ಯ ಇತ್ತು. ಆದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮಹಾ ಶಿವರಾತ್ರಿಯ ದಿನ ಬುಧುವಾರದಂದು 5.20 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ಟಿಕೆಟ್ ದರ ಏರಿಕೆಗಿಂತ ಮೊದಲು ಒಂದು ತಿಂಗಳು ವಾರದ ದಿನಗಳಲ್ಲಿ ಸರಾಸರಿ 8.5 ಲಕ್ಷ ಪ್ರಯಾಣಿಕರ ಓಡಾಟವಿತ್ತು. ದರ ಏರಿಕೆ ಮಾಡಿದ ಬಳಿಕ ಪ್ರತಿದಿನ ಸರಾಸರಿ 2.50 ರಿಂದ 3 ಲಕ್ಷದಷ್ಟು ಕಡಿಮೆಯಾಗಿದೆ. ದಿನೇ ದಿನೇ ಮೆಟ್ರೋ ಪ್ರಯಾಣ ಮಾಡುವವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.