November 14, 2026
Saturday, November 14, 2026
spot_img

ಕೇವಲ ಏಳು ಕಿ.ಮೀ. ಉದ್ದದ ಮೆಟ್ರೋ ಉದ್ಘಾಟನೆಗೆ ಪ್ರಧಾನಿ ಮೋದಿ ಬರಬೇಕಿತ್ತಾ? ಸಚಿವ ಎಂಬಿ ಪಾಟೀಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇವಲ ಏಳು ಕಿಲೋಮೀಟರ್‌ ಉದ್ದದ ಮೆಟ್ರೋ ಜಾಲದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರಬೇಕಿತ್ತಾ? ಇದರ ಅಗತ್ಯ ಏನಿತ್ತು? ಎಂದು ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗ ನಮ್ಮ ಸಿಎಂ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದಲ್ಲಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಬೇಕಿರುವ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ನಿನ್ನೆ ಮೆಟ್ರೊ ಪಿಂಕ್ ಲೈನ್ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದ ಡಿ ಕೆ ಶಿವಕುಮಾರ್ ರಾಜ್ಯಕ್ಕೆ ಬರ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು, ಮೆಟ್ರೊದಲ್ಲಿ ಕರ್ನಾಟಕದ ಕೊಡುಗೆ ಹೀಗೆ ಎಲ್ಲಾ ವಿಷಯಗಳನ್ನು ಪ್ರಧಾನಿಗಳ ಮುಂದೆ ಪ್ರಸ್ತಾಪಿಸಿದ್ದಾರೆ. ಇನ್ನು ಮಾಡಬೇಕಾಗಿರುವುದು ಪ್ರಧಾನಿಯವರ ವಿವೇಚನೆಗೆ ಬಿಟ್ಟ ವಿಚಾರ ಎಂದರು.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಎಲಿವೇಟೆಡ್ ಮಾರ್ಗವನ್ನು ಉದ್ಘಾಟಿಸಿದರು. ಸುಮಾರು 3,470 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹೊಸ ಮಾರ್ಗವು ನಗರದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದರ ಜತೆಗೆ ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲಿದೆ. ಅಲ್ಲದೆ, ಪ್ರಯಾಣಿಕರ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದಿದ್ದಾರೆ.

Must Read