May 6, 2026
Wednesday, May 6, 2026
spot_img

ದಿನೇಶ್ ಕಾರ್ತಿಕ್ ಆರ್‌ಸಿಬಿ ಮೆಂಟರ್ ಆಗಲು ಕಾರಣರಾದರೇ ವಿರಾಟ್? ಇಲ್ಲಿದೆ ಅಸಲಿ ಕಥೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಂಗಳದಲ್ಲಿ ‘ಫಿನಿಶರ್’ ಆಗಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಟಗಾರನಾಗಿ ನಿವೃತ್ತಿ ಪಡೆದ ತಕ್ಷಣವೇ ಅವರು ಈ ಜವಾಬ್ದಾರಿಯನ್ನು ಹೇಗೆ ವಹಿಸಿಕೊಂಡರು ಎಂಬ ಕುತೂಹಲಕ್ಕೆ ಈಗ ಸ್ವತಃ ಕಾರ್ತಿಕ್ ಅವರೇ ಉತ್ತರ ನೀಡಿದ್ದಾರೆ. ಇದರ ಹಿಂದೆ ವಿರಾಟ್ ಕೊಹ್ಲಿ ಅವರ ಮಹತ್ವದ ಪಾತ್ರವಿದೆ ಎಂಬುದು ವಿಶೇಷ.

ಐಪಿಎಲ್ 2024ರ ಸೀಸನ್ ಮುಗಿದ ನಂತರ ದಿನೇಶ್ ಕಾರ್ತಿಕ್ ತಮ್ಮ ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದರು. ಆ ಸಮಯದಲ್ಲಿ ಅವರು ವಿರಾಟ್ ಕೊಹ್ಲಿಯನ್ನು ಭೇಟಿಯಾದಾಗ, ಕೊಹ್ಲಿ ಇವರಿಗೆ ಕೋಚಿಂಗ್ ಕ್ಷೇತ್ರಕ್ಕೆ ಬರುವಂತೆ ಉತ್ತೇಜಿಸಿದ್ದರು. “ನೀನು ತರಬೇತುದಾರನ ಪಾತ್ರದ ಬಗ್ಗೆ ಗಂಭೀರವಾಗಿ ಯೋಚಿಸಬೇಕು, ಇದು ನಿನಗೆ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ” ಎಂದು ಕೊಹ್ಲಿ ಹೇಳಿದ್ದರಂತೆ.

ಆರ್‌ಸಿಬಿಯ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ಅಧಿಕೃತವಾಗಿ ಕೋಚಿಂಗ್ ಆಫರ್ ನೀಡಿದಾಗಲೂ, ಕಾರ್ತಿಕ್ ಮೊದಲು ಚರ್ಚಿಸಿದ್ದು ವಿರಾಟ್ ಜೊತೆ. ಈ ವೇಳೆ ಕೊಹ್ಲಿ, “ಖಂಡಿತವಾಗಿಯೂ ಈ ಜವಾಬ್ದಾರಿಯನ್ನು ವಹಿಸಿಕೊ, ತಂಡಕ್ಕೆ ನಿನ್ನ ಅಗತ್ಯವಿದೆ” ಎಂದು ಭರವಸೆ ನೀಡಿದ್ದರು. ಕೊಹ್ಲಿಯ ಈ ಮಾತುಗಳೇ ಕಾರ್ತಿಕ್ ಅವರನ್ನು ಆರ್‌ಸಿಬಿಯ ಮಾರ್ಗದರ್ಶಕನನ್ನಾಗಿ ಮಾಡಿತು.

ದಿನೇಶ್ ಕಾರ್ತಿಕ್ ಅವರ ಅನುಭವ ಮತ್ತು ಆಟದ ಬಗೆಗಿನ ಜ್ಞಾನ ಆರ್‌ಸಿಬಿ ತಂಡಕ್ಕೆ ವರದಾನವಾಯಿತು. ಮುಖ್ಯ ಕೋಚ್ ಆಂಡಿ ಫ್ಲವರ್ ಮತ್ತು ಕಾರ್ತಿಕ್ ಜೋಡಿಯ ಮಾರ್ಗದರ್ಶನದಲ್ಲಿ ಆರ್‌ಸಿಬಿ ತಂಡವು 2025ರ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿತು. ಅಭಿಮಾನಿಗಳ ದಶಕಗಳ ಕಾಲದ ಕನಸನ್ನು ನನಸು ಮಾಡುವಲ್ಲಿ ಡಿಕೆ ಅವರ ಪಾತ್ರ ಅಪಾರ.

ಆರ್‌ಸಿಬಿ ತಂಡದ ಯಶಸ್ಸಿನ ನಂತರ ದಿನೇಶ್ ಕಾರ್ತಿಕ್ ಅವರ ಕೋಚಿಂಗ್ ಶೈಲಿಗೆ ವಿಶ್ವದಾದ್ಯಂತ ಮನ್ನಣೆ ಸಿಗುತ್ತಿದೆ. ಇದರ ಫಲವಾಗಿ, 2026ರ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಅವರು ಲಂಡನ್ ಸ್ಪಿರಿಟ್ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಆಟಗಾರನಾಗಿ ಮಾತ್ರವಲ್ಲದೆ, ತರಬೇತುದಾರನಾಗಿಯೂ ಡಿಕೆ ಈಗ ಜಾಗತಿಕ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !