ಅಂಪೈರ್‌ ಕೈಯ್ಯಿಂದ ಬಲವಂತವಾಗಿ ಔಟ್‌ ತೀರ್ಪು ಕೊಡಿಸಿದ ಪಾಕ್‌ ಆಟಗಾರ! ಆಗಿದ್ದೇನು? ವಿಡಿಯೋ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ಆವೃತ್ತಿಯ ಏಷ್ಯಾಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಅದ್ಧೂರಿ ಪ್ರದರ್ಶನ ನೀಡಿದ ಲಂಕಾ 23 ರನ್​ಗಳಿಂದ ಗೆದ್ದು ಕಪ್‌ ಎತ್ತಿಹಿಡಿದು ಸಂಭ್ರಮಿಸಿದೆ.
ಪಂದ್ಯದುದ್ದಕ್ಕೂ ಎರಡೂ ತಂಡಗಳು ಚಾಂಪಿಯನ್‌ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಪಂದ್ಯವನ್ನು ಫ್ಯಾನ್ಸ್  ಉಸಿರು ಬಿಗಿಹಿಡಿದು ನೋಡುತ್ತಿದ್ದರು. ಈ ವೇಳೆ ನಡೆದ ಒಂದು ಘಟನೆ ಅಭಿಮಾನಿಗಳ ಗಮನ ಸೆಳೆಯಿತು.
ಶ್ರೀಲಂಕಾ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಆ ಓವರ್‌ ನಲ್ಲಿ ಪಾತುಮ್ ನಿಸ್ಸಾಂಕ (8) ಮತ್ತು ದನುಷ್ಕಾ ಗುಣತಿಲಕ (1) ಅವರ ವಿಕೆಟ್‌ಗಳನ್ನು ಹ್ಯಾರಿಸ್ ರೌಫ್ ಕಬಳಿಸಿದರು. ಅದೇ ಓವರ್‌ ನಲ್ಲಿ ರೌಫ್ ಗೆ ಮತ್ತೊಂದು ವಿಕೆಟ್ ಪಡೆಯುವ ಅವಕಾಶವಿತ್ತು. ಭನುಕಾ ರಾಜಪಕ್ಷರ ಎಲ್ಬಿಡಬ್ಲ್ಯೂ ಔಟ್‌ಗಾಗಿ ಪಾಕ್ ಆಟಗಾರರು ದೊಡ್ಡ ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದು ಘೋಷಿಸಿದರು. ಆಗ ಪಾಕಿಸ್ತಾನ ರಿವ್ಯೂ ತೆಗೆದುಕೊಳ್ಳಲು ನಿರ್ಧರಿಸಿತು. ಆದರೆ, ಮೂರನೇ ಅಪೈರ್‌ ಸಹ ಆನ್ ಫೀಲ್ಡ್ ಅಂಪೈರ್ ಅವರ ನಾಟೌಟ್ ನಿರ್ಧಾರವೇ ಸರಿ ಎಂದು ಘೋಷಿಸಿದರು. ಈ ವೇಳೆ  ಆನ್-ಫೀಲ್ಡ್ ಅಂಪೈರ್‌ ಬಳಿ ಬಂದ ಪಾಕ್‌ ಆಲ್ರೌಂಡರ್‌ ಶಾದಾಬ್ ಖಾನ್, ಔಟ್‌ ನೀಡುವಂತೆ ಒತ್ತಾಯಿಸಿ ಅಂಪೈರ್‌ ಕೈಯ್ಯನ್ನು ಬಲವಂತವಾಗಿ ಎತ್ತಿಸುತ್ತಿರುವುದನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಶಾದಾಬ್ ಖಾನ್ ತಮಾಷೆಗಾಗಿ ಹೀಗೆ ಮಾಡಿದ್ದು, ಅಂಪೈರ್‌ ಸಹ ನಕ್ಕು ಸುಮ್ಮನಾಗಿದ್ದಾರೆ. ಒಟ್ಟಿನಲ್ಲಿ ಈ ಘಟನೆ ರೋಚಕವಾಗಿ ಸಾಗುತ್ತಿದ್ದ ಪಂದ್ಯದಲ್ಲಿ ಉಸಿರು ಬಿಗಿಹಿಡಿದು ಕುಳಿತಿದ್ದ ಫ್ಯಾನ್ಸ್‌ ಮುಖದಲ್ಲಿ ನಗು ಅರಳಿಸಿದ್ದು, ಸಾಮಾಜಿಕ ತಾಣಗಳಲ್ಲಿ ಹಲವಾರು ಮಂದಿ ಈ ವಿಡಿಯೋಗೆ ತಮಾಷೆಯ ಕಾಮೆಂಟ್‌ ಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!