ಬ್ರಾಡ್‌ ಒಂದೇ ಓವರ್ ನಲ್ಲಿ 6 ಸಿಕ್ಸರ್‌ ಸಿಡಿಸಿದ ಸಾಧನೆಗೆ 15 ವರ್ಷ: ಮಗನ ಜೊತೆಗೆ ಯುವಿ ಸಂಭ್ರಮ ಹೇಗಿತ್ತು ನೋಡಿ…

ಹೊಸದಿಗಂತ ಡಿಜಿಡಲ್‌ ಡೆಸ್ಕ್‌
ಅದು 2007ರ ಚೊಚ್ಚಲ ಟಿ 20 ವಿಶ್ವಕಪ್‌.. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತಕ್ಕೆ ಎದುರಾಗಿದ್ದು ಬಲಿಷ್ಠ ಇಂಗ್ಲೆಂಡ್ ತಂಡ. ಮೆನ್ ಇನ್ ಬ್ಲೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 15 ಓವರ್‌ ಗಳ ವರೆಗೆ ಪಂದ್ಯ ಶಾಂತವಾಗಿ ಸಾಗುತ್ತಿತ್ತು. ಎರಡು ತಂಡಗಳ ನಡುವೆ ಸಮಬಲದ ಹೋರಾಟ ಸಾಗುತ್ತಿದ್ದಾಗಲೇ ರಾಬಿನ್‌ ಉತ್ತಪ್ಪ ವಿಕೆಟ್‌ ಬಿತ್ತು. ಯುವರಾಜ್‌ ಸಿಂಗ್‌ ಕ್ರೀಸ್‌ ಗೆ ಬಂದರು. ಆ ಬಳಿಕ ನಡೆದುದೆಲ್ಲಾ ಇತಿಹಾಸ. ಯುವರಾಜನ ಬಿರುಗಾಳಿ ವೇಗದ ಅಬ್ಬರಕ್ಕೆ ಆಂಗ್ಲರು ಧೂಳಿಪಟವಾದರು.
ಭಾರತದ ಇನ್ನಿಂಗ್ಸ್‌ನ 19 ನೇ ಓವರ್‌ ಎಸೆಯಲು ಬಂದ ಸ್ಟೂವರ್ಟ್‌ ಬ್ರಾಡ್‌ ಗೆ ಯುವಿ ಆರ್ಭಟಕ್ಕೆ ಕಂಗಾಲಾಗಿಹೋಗಿದ್ದರು.
ಬ್ರಾಡ್‌ನ ಓವರ್‌ನಲ್ಲಿ ಭರ್ಜರಿ 6 ಸಿಕ್ಸರ್‌ಗಳನ್ನು ಸಿಡಿಸಿದ ಯವಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ತಂದರು. ಯುವರಾಜ್ ಟಿ 20ಯಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ ಮನ್‌ ಎನಿಸಿಕೊಂಡರು. ಜೊತೆಗೆ ಅದು ಈ ವರೆಗೆ ಟಿ20 ಸ್ವರೂಪದಲ್ಲಿ ಅತ್ಯಂತ ವೇಗದ ಅರ್ಧಶತಕವಾಗಿದೆ.

ಯುವರಾಜ್ ಆರ್ಭಟದ ಬಲದಿಂದ ಭಾರತ 218 ರನ್ ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು. ಅಂತಿಮವಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಭಾರತ 18 ರನ್‌ಗಳಿಂದ ಗೆದ್ದುಕೊಂಡಿತು.
ಸೋಮವಾರ (ಸೆಪ್ಟೆಂಬರ್ 19) ಯುವರಾಜ್ ಅವರ ಅಮೋಘ ಪ್ರದರ್ಶನಕ್ಕೆ 15 ನೇ ವಾರ್ಷಿಕೋತ್ಸವ. ಈ ಬಗ್ಗೆ ಸಂಭ್ರಮಿಸುತ್ತಾ, ಮಗ ಓರಿಯನ್ ಸಿಂಗ್ ತನ್ನ ಮಡಿಲಲ್ಲಿ ಕುಳಿತಿರುವ ವಿಡಿಯೋವನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿರುವ ಯುವಿ, “ 15 ವರ್ಷಗಳ ಬಳಿಕ ಈ ದೃಶ್ಯವನ್ನು ಒಟ್ಟಿಗೆ ವೀಕ್ಷಿಸಲು ಇದಕ್ಕಿಂತ(ಮಗನಿಗಿಂತ) ಉತ್ತಮ ಸಂಗಾತಿ ಸಿಗಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ.

ಯುವರಾಜ್ ಪಂದ್ಯಾವಳಿಯಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದರು. ಯುವಿ ಅಬ್ಬರದ ಬಲದಿಂದ ಮಹೇಂದ್ರ ಸಿಂಗ್ ಧೋನಿ ಅವರ ತಂಡವು 2007 ರಲ್ಲಿ ಚೊಚ್ಚಲ ICC T20 ವಿಶ್ವಕಪ್ ಅನ್ನು ಗೆಲ್ಲಲು ಸಾಧ್ಯವಾಯಿತು. 2019 ರಲ್ಲಿ, ಯುವರಾಜ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 304 ODIಗಳು, 58 T20Iಗಳು, ಮತ್ತು 40 ಟೆಸ್ಟ್‌ಗಳಲ್ಲಿ ಆಡಿರುವ ಯುವಿ, ತನ್ನ ವೃತ್ತಿಜೀವನದಲ್ಲಿ ಚಿರತೆ ವೇಗದ ಫೀಲ್ಡಿಂಗ್, ಸ್ಫೋಟಕ ಬ್ಯಾಟಿಂಗ್ ಹಾಗೂ ಪರಿಣಾಮಕಾರಿ ಬೌಲಿಂಗ್ ಮೂಲಕ ತಮ್ಮ ತಂಡಕ್ಕೆ ಪಂದ್ಯಗಳನ್ನು ಗೆಲ್ಲುವ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!