ಜಲ ಮಂಡಳಿ ಉಳಿಸಬೇಕು ಅಂದರೆ ನೀರಿನ ದರ ಏರಿಕೆ ಅನಿವಾರ್ಯ: ಡಿಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜಲ ಮಂಡಳಿ ಉಳಿಸಬೇಕಿದ್ದು, ಹೀಗಾಗಿ ನೀರಿನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಗುರುವಾರ ಹೇಳಿದರು.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ ಕಳೆದ 11 ವರ್ಷಗಳಿಂದ ಏರಿಕೆ ಮಾಡಿಲ್ಲ. ಬಿಡ್ಬ್ಯೂಎಸ್ ಎಸ್ ಬಿಗೆ ವರ್ಷಕ್ಕೆ ಸುಮಾರು 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಜೊತೆಗೆ ನೀರಿನ ಸಂಪರ್ಕ ಜಾಲವನ್ನು ಹೆಚ್ಚು ಮಾಡಬೇಕಿದೆ. ಇದಕ್ಕೆ ಸುಮಾರು 6 ಸಾವಿರ ಕೋಟಿ ಬೇಕಾಗಿದೆ. ಇದಕ್ಕಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಹೀಗಾಗಿ ನೀರಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿಯವರ ಪರಂಪರೆಯನ್ನು ಅಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿ ಗಾಂಧಿಯವರ ತತ್ವವನ್ನು ಒಪ್ಪಿಕೊಳ್ಳದಿರಬಹುದು, ಆದರೆ, ಗಾಂಧಿ ಪ್ರತಿಮೆಯ ಕೆಳಗೆ ಪ್ರತಿಭಟನೆ ನಡೆಸಿದ್ದಾರೆ. ಅಹಿಂಸಾತ್ಮಕ ಪ್ರತಿಭಟನೆಯ ತತ್ವಗಳನ್ನು ನಮಗೆ ಕಲಿಸಿದವರು ಗಾಂಧಿ, ಸ್ವದೇಶಿ ಚಳವಳಿಯನ್ನು ಪ್ರಾರಂಭಿಸಿದವರು ಗಾಂಧಿ, ಆದರೆ, ಪ್ರಧಾನಿ ಅವರು ಇದನ್ನೇ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿದ್ದಾರೆಂದು ತಿಳಿಸಿದರು.

ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿಲ್ಲ. ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಗಾಂಧಿ ಅವರ ಸಂದೇಶಗಳನ್ನು ಪ್ರಚಾರ ಮಾಡಲು ರಾಜ್ಯದಾದ್ಯಂತ ವರ್ಷಪೂರ್ತಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಮಾಡಬೇಕು ಎನ್ನುವ ಆಲೋಚನೆ ಸರ್ಕಾರದ ಮುಂದಿದೆ. ಗಾಂಧಿ ಭಾರತ ಕಾರ್ಯಕ್ರಮ ಆಚರಣಾ ಸಮಿತಿ ನೀಡಿರುವ ವರದಿ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್ ವೇಳೆ ತಿಳಿಸಬಹುದು. ಇದರ ಬಗ್ಗೆ ಎಐಸಿಸಿ ಅಧ್ಯಕ್ಷರ ಬಳಿಯೂ ಮನವಿ ಮಾಡಿದ್ದೇನೆಂದು ಹೇಳಿದರು.

ಏತನ್ಮಧ್ಯೆ ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯನ್ನು ಕೊಂದಿರಬಹುದು, ಆದರೆ ಗಾಂಧಿ ಮೌಲ್ಯಗಳನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ. ಗಾಂಧೀಜಿಯವರ ಮೌಲ್ಯಗಳು ಇಂದಿಗೂ ಜೀವಂತವಾಗಿವೆ ಎಂದರು

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!