ಹೊಸದಿಗಂತ ವರದಿ, ಮಂಡ್ಯ :
ಬೇಸಿಗೆ ಅವಧಿಯಲ್ಲಿ ಅಲ್ಪಾವಧಿ ಬೆಳೆ ಬೆಳೆಯಲು ಅನುಕೂಲವಾಗುವಂತೆ ಜ.10 ರಿಂದ ಕೆಆರ್‌ಎಸ್ ಅಚ್ಚುಕಟ್ಟು ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅತಿಥಿಗೃಹದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಾವಧಿ ಬೆಳೆ ಬೆಳೆಯಲು ಕಟ್ಟು ಪದ್ಧತಿಯಡಿ ನಾಲ್ಕು ಕಟ್ಟು ನೀರು ಹರಿಸುವುದಕ್ಕೆ ನಿರ್ಧರಿಸಲಾಗಿದೆ. ಕಾಲ ಮಿತಿಯೊಳಗೆ ಅಲ್ಪಾವಧಿ ಬೆಳೆ ನಾಟಿ ಮಾಡಲು ರೈತರು ಮುಂದಾಗಬೇಕು. ವಿಳಂಬ ಮಾಡಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದರು.
ಕಟ್ಟು ನೀರು ಪದ್ದತಿ
ಎರಡೂ ಬೆಳೆಗೆ ನೀರು ಕೊಡಲು ನಮ್ಮ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ವರುಣನ ಕೃಪೆ ಹೇಗಿರುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಹೀಗಾಗಿ ಬೇಗ ಒಟ್ಟಲು ಹಾಕಿ, ಅಲ್ಪಾವಧಿ ಬೆಳೆ ನಾಟಿ ಮಾಡಿ. 18 ದಿನ ನೀರು ಬಿಡುವುದು 12 ದಿನ ನಿಲ್ಲಿಸುವ (ಕಟ್ಟು ನೀರು ಪದ್ಧತಿ) ನಿರ್ಧಾರ ಮಾಡಿರುವುದಾಗಿ ಸ್ಪಷ್ಟಪಡಿಸಿದರು.