Friday, June 2, 2023

Latest Posts

ಕುಮಟಾದಲ್ಲಿ ಕೊಡ ನೀರಿಗೂ ಪರದಾಟ!

– ಗಣೇಶ ಜೋಶಿ ಸಂಕೊಳ್ಳಿ

ದಿನದಿಂದ ದಿನಕ್ಕೆ ಉರಿ ಬಿಸಿಲು ಹೆಚ್ಚುತ್ತಿದ್ದು, ಕುಮಟಾ ತಾಲೂಕಿನ ಜನರು ಸೆಕೆ ತಾಳಲಾರದೆ ಹೈರಣಾಗುತ್ತಿದ್ದ ಸಂದರ್ಭದಲ್ಲಿ ಸೋಮವಾರ ರಾತ್ರಿ ಕೆಲ ಕಾಲ ಮಳೆಯಾಗಿ ಇಳೆಗೆ ತಂಪೆರೆದಿತ್ತಾದರೂ, ಮಂಗಳವಾರ ಸೆಕೆ ಮುಂದುವರೆಯುವ ಮೂಲಕ ಜನರನ್ನು ಮತ್ತೆ ಆತಂಕಕ್ಕೆ ದೂಡಿದೆ.

ತಾಲೂಕಿನ ಕೆಲವೆಡೆ ಬಾವಿಗಳು ಬತ್ತಿಹೋಗಿ ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿದ್ದಾರೆ. ಕಳೆದೆರಡು ವರ್ಷಗಳ ಹಿಂದಿನವರೆಗೂ ಡಿಸೆಂಬರ್-ಜನವರಿ ತಿಂಗಳಲ್ಲಿ ಒಂದೆರಡು ಅಕಾಲಿಕ ಮಳೆಗಾಲ ನೆನಪಿಸುವ ರೀತಿ ಸುರಿಯುತ್ತಿತ್ತು. ಇದರಿಂದ ಬಾವಿಯಲ್ಲಿ ನೀರು ಬತ್ತುತ್ತಿರಲಿಲ್ಲ. ಆದರೆ ಈ ವರ್ಷ ಮಳೆಗಳೂ ಕಾಣದಾಗಿದೆ.

ಅಕಾಲಿಕ ಮಳೆಯಿಂದ ಕೊಂಚ ಜಲಮೂಲ ಸುಸ್ತಿರವಾಗಿ ಸಂತೆಗುಳಿ ಮರಾಕಲ್ದಿಂದ ಕುಮಟಾ – ಹೊನ್ನಾವರ ಪಟ್ಟಣ ವ್ಯಾಪ್ತಿಗೆ ನಲ್ಲಿ ನೀರು ಪೂರೈಕೆಗೆ ತೊಂದರೆ ಆಗುತ್ತಿರಲಿಲ್ಲ. ಆದರೆ ಮೇ ಕೊನೆಯ ಮಳೆ ಬಿಟ್ಟರೆ ಈ ಡಿಸೆಂಬರ್, ಜನವರಿ ತಿಂಗಳಿನಲ್ಲಿ ಒಂದೇ ಒಂದು ಅಕಾಲಿಕ ಮಳೆಯಾಗಿಲ್ಲ. ಇದರಿಂದ ಈ ಸಲದ ಬೆಂಕಿ ರೂಪದ ಬೇಸಿಗೆಗೆ ಹಳ್ಳ, ಕೊಳ್ಳ ಹಾಗೂ ಬಾವಿ ನೀರು ಬತ್ತಿ ಹೋದಂತೆ ಮರಾಕಲ್ ಭಾಗದಲ್ಲೂ ಅಘನಾಶಿನಿ ನದಿಯ ನೀರು ಬತ್ತಿಹೋಗಿದೆ. ಜಾಕವೆಲ್ ಬಳಿ ನೀರಿಲ್ಲದಿದ್ದರಿಂದ ಪುರಸಭೆ ನಲ್ಲಿ ನೀರು ಪೂರೈಕೆ ಸ್ಥಗಿತಗೊಳಿಸಿದೆ. ಇದರಿಂದ ಪಟ್ಟಣ ಪ್ರದೇಶದಲ್ಲಿ ಜನರಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಪಟ್ಟಣ ವ್ಯಾಪ್ತಿಯ ಜನ ಹಾಗೂ ಹೋಟೆಲ್ ನಡೆಸುತ್ತಿರುವವರು ಪ್ರತಿನಿತ್ಯ ಅವಶ್ಯವಿರುವ ನೀರನ್ನು ಟ್ಯಾಂಕ್ನಲ್ಲಿ ನೀರು ಪೂರೈಸುವವರಿಂದ ತರಿಸಿಕೊಳ್ಳುತ್ತಿದ್ದಾರೆ. ಈಗ ಒಂದು ತಿಂಗಳ ಹಿಂದೆ 1ಸಾವಿರ ಲೀಟರ್ ಸಿಂಟೆಕ್ ಟಾಕಿ ನೀರಿಗೆ 300 ರೂ. ಇತ್ತು. ಈಗ ಎಲ್ಲೆಡೆ ನೀರಿಗಾಗಿ ಬೇಡಿಕೆ ಹೆಚ್ಚಾದ್ದರಿಂದ ಈ ಬೆಲೆ 350ರೂ.ಕ್ಕೆ ಏರಿದೆ. ಈ ದರ ಪೂರೈಕೆಯ ಅಂತರದ ಮೇಲೆ ಹೆಚ್ಚಾಗಲೂಬಹುದು. ಸಾಮಾನು ಸರಂಜಾಮುಗಳನ್ನು ಸಾಗಾಟ ಮಾಡುತ್ತಿದ್ದ ಲಗೇಜ್ ರಿಕ್ಷಾ ಹೊಂದಿದವರು ನೀರು ಸರಬರಾಜು ಮಾಡುತ್ತಿದ್ದಾರೆ. ಈಗ ಅವರಿಗೆ ಇದೊಂದು ದೊಡ್ಡ ವ್ಯಾಪಾರವಾಗಿದೆ. ಇದರಿಂದ ಪೇಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಿರಾಣಿ ಸೇರಿದಂತೆ ಇನ್ನಿತರ ವಸ್ತು ಖರೀದಿಸಿದವರಿಗೆ ಇದನ್ನು ಸಾಗಿಸಲು ಲಗೇಜ್ ರಿಕ್ಷಾ ಸಿಗದೆ ಪರದಾಡುತ್ತಿರುತ್ತಾರೆ.

ಪುರಸಭೆಯಿಂದ 2 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ಕುಟುಂಬವೊಂದಕ್ಕೆ 10 ಕೊಡ ನೀರು ಪೂರೈಸಲಾಗುತ್ತಿದೆ. ನೀರಿನ ಪ್ರಮಾಣ ಜಾಸ್ತಿ ಇರುವ ಬೊರವೆಲ್ ಮೂಲಕ ನೀರೆತ್ತಿ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!