ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷಗಳ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದ ಮೇಕೆದಾಟು (Mekedatu), ಅಪ್ಪರ್ ಕೃಷ್ಣ, ಮಹದಾಯಿ (Mahadayi) ಮತ್ತು ಕಾವೇರಿ ನದಿ ವಿವಾದ ಬಗ್ಗೆ ಸರ್ವ ಪಕ್ಷಗಳ ನಿಯೋಗ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Naredra Modi) ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊತ್ತೇವೆ. ಇದಕ್ಕೆ ಸರ್ವ ಪಕ್ಷಗಳು ಸಮ್ಮತಿ ಸೂಚಿಸಿವೆ ಎಂದು ಹೇಳಿದರು.
ಕೇಂದ್ರ ಪರಿಸರ ಸಚಿವರನ್ನು ಕೂಡ ನಿಯೋಗ ಭೇಟಿ ಮಾಡುತ್ತೇವೆ. ಮೇಕೆದಾಟು ಯೋಜನೆಗೆ ಅರಣ್ಯ ಪ್ರದೇಶದ ಕ್ಲಿಯರೆನ್ಸ್ ಕೊಡಬೇಕೆಂದು ಮನವಿ ಮಾಡುತ್ತೇವೆ ಎಂದರು.
ಜಲ ವಿವಾದ, ಭಾಷೆ ಗಡಿ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ. ಸರ್ಕಾರ ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿಲುವುಗಳಿಗೆ ಬೆಂಬಲವಿದೆ ಎಂದು ಸರ್ವ ಪಕ್ಷದ ನಾಯಕರು ಹೇಳಿದ್ದಾರೆ.
ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ಆಗಸ್ಟ್ ಕೊನೆಯವರೆಗೆ 86.38 ಟಿಎಂಸಿ ನೀರು ಬಿಡಬೇಕಾಗಿತ್ತು. ಜೂನ್ನಲ್ಲಿ ಮಳೆಯ ಕೊರತೆ ಆಗಿತ್ತು, ಜುಲೈನಲ್ಲಿ ಮಳೆ ಬಂದಿದೆ. ಆಗಸ್ಟ್ ತಿಂಗಳಿನಲ್ಲಿ ಮಳೆ ಕೊರತೆ ಆಗಿದೆ. ಕಬಿನಿ ಜಲಾಶಯಕ್ಕೆ ನೀರು ಬರುವುದೂ ಕೂಡ ಕಡಿಮೆಯಾಯ್ತು. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಜೂನ್ನಲ್ಲಿ ಎರಡು ಟಿಎಂಸಿ ನೀರು, ಜುಲೈನಲ್ಲಿ 8.74 ಟಿಎಂಸಿ, ಆಗಸ್ಟ್ನಲ್ಲಿ 26 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದರು.
ಸುಪ್ರೀಂಕೋರ್ಟ್ನಲ್ಲಿ ಕಾವೇರಿ ಜಲ ವಿವಾದದ ಬಗ್ಗೆ ಕರ್ನಾಟಕದ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು ಸಲಹೆ ನೀಡಿದ್ದೇವೆ. ತಮಿಳುನಾಡು ಅರ್ಜಿ ವಜಾ ಆಗುವಂತೆ ವಾದಮಾಡಿ ಎಂದಿದ್ದೇವೆ. ಬೆಳೆಗಳ ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು. ರೈತರ ರಕ್ಷಣೆ ರಾಜ್ಯ ಸರ್ಕಾರದ ಹೊಣೆ ಎಂದರು.
ಬಿಳಿಗುಂಡ್ಲಿನಿಂದ ಸಾಮಾನ್ಯ ವರ್ಷಗಳಲ್ಲಿ 127 ಟಿಎಂಸಿ ನೀರು ಬಿಡಬೇಕಾಗಿತ್ತು. ಟ್ರಿಬ್ಯೂನಲ್ ಪ್ರಕಾರ 192 ಟಿಎಂಸಿ ಬಿಡಬೇಕು ಎಂದಿತ್ತು. ಇವತ್ತಿನ ತನಕ ಸಂಕಷ್ಟದ ಸ್ಥಿತಿಯಲ್ಲಿ ನೀರು ಬಿಡಲಾಗುವುದಿಲ್ಲ. ಹೀಗಾಗಿ ಕಡಿಮೆ ನೀರನ್ನೇ ಬಿಟ್ಟಿದ್ದೇವೆ. ರೈತರ ಬೆಳೆಗಳನ್ನು ರಕ್ಷಣೆ ಮಾಡಬೇಕು, ಕುಡಿಯುವ ನೀರನ್ನೂ ಕೊಡಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಕಾವೇರಿ ನಿಮಗದ ಮುಂದೆ ವಾದ ಮಂಡಿಸಿದ್ದೇವೆ. 11ನೇ ತಾರಿಕು ತಾರೀಕು ಕಾವೇರಿ ನಿಗಮ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಅಂತ ಹೇಳಿದ್ದರು. ಅಷ್ಟು ನೀರು ನಮ್ಮಲ್ಲಿಲ್ಲ ಎಂದಾಗ ರೆಗ್ಯುಲೇಟರಿ ಕಮಿಟಿ 10 ಸಾವಿರ ಕ್ಯುಸೆಕ್ಸ್ ನೀರು ಬಿಡಲು ಹೇಳಿದ್ದರು ಎಂದು ತಿಳಿಸಿದ್ದಾರೆ.
ಇದರ ಮಧ್ಯೆ ಸುಪ್ರಿಂ ಕೋರ್ಟ್ನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿದೆ. ಮೆಟ್ಟೂರ್ ಡ್ಯಾಂನಲ್ಲಿ 60 ಟಿಎಂಸಿ ನೀರು ಇತ್ತು. ಕುರವೈ ಬೆಳೆಗೆ 35 ಟಿಎಂಸಿ ನೀರು ತಮಿಳುನಾಡಿಗೆ ಬೇಕು. ಆದರೆ ಅವರು ಬಳಸಿಕೊಂಡಿರೋದು 65 ಟಿಎಂಸಿಗಿಂತ ಹೆಚ್ಚು. ನಿಯಮಕ್ಕಿಂತ ಹೆಚ್ಚು ಕುರುವೈ ಬೆಳೆ ಬೆಳೆಯುತ್ತಿದ್ದಾರೆ. ಮೆಟ್ಟೂರ್ ಡ್ಯಾಂನಲ್ಲಿ ನೀರು ಇದ್ದರೂ ಕೂಡ ಅವರು ನೀರಿಲ್ಲ ಅಂತ ವಾದ ಮಂಡಿಸುತ್ತಿದ್ದಾರೆ ಎಂದರು.
ಈ ಸಭೆಯಲ್ಲಿ ಇನ್ನೂ ಸಭೆಯಲ್ಲಿ ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಜಗದೀಶ ಶೆಟ್ಟರ, ಡಿ.ವಿ. ಸದಾನಂದಗೌಡ, ವೀರಪ್ಪ ಮೊಯಿಲಿ, ಸಚಿವರಾದ ಹೆಚ್.ಕೆ. ಪಾಟೀಲ, ಚಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹಿರಿಯ ವಕೀಲರಾದ ಮೋಹನ್ ಕಾತರಕಿ ಮತ್ತು ಇತರ ಕಾನೂನು ತಜ್ಞರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.