ಹೊಸದಿಗಂತ ವರದಿ,ಶಿವಮೊಗ್ಗ :
ಭದ್ರಾ ಜಲಾಶಯದಿಂದ ಮಂಗಳವಾರ ಬೆಳಿಗ್ಗೆಯಿಂದ ನದಿಗೆ ನೀರು ಬಿಡುಗಡೆಗೊಳಿಸಲಾಗಿದೆ. ಸಂಜೆ ವೇಳೆಗೆ ನೀರಿನ ಪ್ರಮಾಣ ೩೦ ಸಾವಿರ ಕ್ಯೂಸೆಕ್ ಏರಿಕೆಯಾಗಿದೆ. ಇದರಿಂದಾಗಿ ಭದ್ರಾವತಿಯಲ್ಲಿನದಿತೀರದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ಈಗಾಗಲೇ ನಗರದ ಹೃದಯ ಭಾಗದಲ್ಲಿ ಹಳೇ ಸೇತುವೆ ಬಳಿ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಹೊಸ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. ಮುನ್ನಚ್ಚರಿಕೆ ಕ್ರಮವಾಗಿ ಸಂಜೆ ೫.೩೦ರ ವೇಳೆಗೆ ಸೇತುವೆ ಮೇಲಿನ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆ ಎರಡು ಕಡೆ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ.
ಉಳಿದಂತೆ ಗುಂಡೂರಾವ್ ಶೆಡ್, ಎಕಿನ್ಸಾ ಕಾಲೋನಿ, ಬಿ.ಎಚ್ ರಸ್ತೆ ಅಂಬೇಡ್ಕರ್ ಕಾಲೋನಿ, ಕವಲಗುಂದಿ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.