ಟಿ.ಕೆ.ಹಳ್ಳಿ ಯಂತ್ರಾಗಾರಕ್ಕೆ ನುಗ್ಗಿದ ನೀರು: 4 ದಿನ ಬೆಂಗಳೂರಿಗೆ ಕುಡಿವ ನೀರು ಸರಬರಾಜು ಬಂದ್

ಹೊಸದಿಗಂತ ವರದಿ, ಮಂಡ್ಯ:
ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬಳಿ ಇರುವ ಬೆಂಗಳೂರು ಜಲಮಂಡಳಿ ಯಂತ್ರಾಗಾರ ಸಂಪೂರ್ಣ ಮುಳುಗಡೆಯಾಗಿದ್ದು, ಯಂತ್ರಾಗಾರದಲ್ಲಿರುವ ಮೋಟಾರ್‌ಗಳು ನೀರಿನಲ್ಲಿ ಮುಳುಗಿಹೋಗಿವೆ. ಇದರಿಂದಾಗಿ ಬೆಂಗಳೂರಿಗೆ ಸರಬರಾಜಾಗುವ ಕುಡಿಯುವ ನೀರಿನ ಸರಬರಾಜಿನಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ.
ಜಲಮಂಡಳಿಯ ಜಲರೇಚಕ ಯಂತ್ರಗಾರ ಸಂಪೂರ್ಣ ಜಲಾವೃತವಾಗಿದ್ದುಘಿ, ಟಿ.ಕೆ. ಹಳ್ಳಿ ಜಲಮಂಡಳಿ ಮೂಲಕವೇ ಬೆಂಗಳೂರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಯಂತ್ರಾಗಾರ ಸಂಪೂರ್ಣ ಜಲಾವೃತವಾಗಿದೆ.
ಜಲಮಂಡಳಿ ಸ್ಥಾಪಿಸಿರುವ ಯಂತ್ರಾಗಾರದಲ್ಲಿರುವ ನೀರೆತ್ತುವ ಪಂಪ್‌ಗಳು ಮುಳುಗಡೆಯಾಗಿರುವ ಕಾರಣ ಬೆಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಬಂದ್ ಆಗಿದೆ.
ಸಿ.ಎಂ. ದೌಡು :
ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಯಂತ್ರಾಗಾರ ಸಂಪೂರ್ಣ ಜಲಾವೃತವಾಗಿರುವ ಸುದ್ಧಿ ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟಿ.ಕೆ. ಹಳ್ಳಿ ಜಲಮಂಡಳಿ ಯಂತ್ರಾಗಾರದತ್ತ ದೌಡಾಯಿಸಿದ್ದಾರೆ.
ಮಧ್ಯಾಹ್ನ 1.30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಮಳವಳ್ಳಿಗೆ ಪ್ರಯಾಣ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಮಳವಳ್ಳಿಯಿಂದ ರಸ್ತೆ ಮಾರ್ಗವಾಗಿ ಟಿ.ಕೆ. ಹಳ್ಳಿಗೆ ಪ್ರವಾಸ ಕೈಗೊಂಡರು.
ಹಲಗೂರು ಸುತ್ತಮುತ್ತ ಅಪಾರ ನಷ್ಟ:
ಮಳವಳ್ಳಿ ತಾಲೂಕಿನ ಹಲಗೂರು ಸುತ್ತಮುತ್ತ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ದಳವಾಯಿ ಕೋಡಿಹಳ್ಳಿಯಲ್ಲಿ ಅಂಗಡಿಗೆ ನೀರು ನುಗ್ಗಿದೆ. ಬಸವರಾಜು ಎಂಬುವರ ಗೊಬ್ಬದ ಅಂಗಡಿಗೆ ನೀರು ನುಗ್ಗಿ ಸುಮಾರು 3 ಲಕ್ಷ ರೂ. ವೌಲ್ಯದ ರಸಗೊಬ್ಬರ ನಷ್ಟವಾಗಿದೆ.
ಹರೀಶ್ ಎಂಬುವರ ಚಿಲ್ಲರೆ ಅಂಗಡಿ, ಮೆಟಿಕಲ್ ಸ್ಟೋರ್, ಚಂದ್ರಪ್ಪಘಿ, ನಾಗಣ್ಣ, ಸುರೇಶ ಎಂಬುವರ ಮನೆಗೆ ನೀರು ನುಗ್ಗಿದೆ. ಗುಂಡಾಪುರ ಗೇಟ್ ಬಳಿ ಇರುವ ಅರಣ್ಯ ಇಲಾಖೆ ಕಚೇರಿಗೂ ನೀರು ನುಗ್ಗಿದ್ದು, ಕಚೇರಿಯಲ್ಲಿದ್ದ ರೈಲುಗಳು ನೀರಿನಲ್ಲಿ ಮುಳುಗಡೆಯಾಗಿವೆ. ಒಟ್ಟಾರೆ ಮಳೆಯಿಂದಾಗಿ ಅಪಾರ ಪ್ರಮಾಣ ನಷ್ಟ ಉಂಟಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!