ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ನದಿಗಳಿಗೆ ರಾಜಕೀಯ ಗಡಿ ಬಗ್ಗೆ ಗೊತ್ತಿಲ್ಲ. ನೀರು ಎಲ್ಲರನ್ನೂ ಒಗ್ಗೂಡಿಸಬೇಕೇ ಹೊರತು ದೂರ ಮಾಡಬಾರದು ಎಂದು ತಮಿಳುನಾಡು ಸಿಎಂ ವಿಜಯ್ ಸಮ್ಮುಖದಲ್ಲಿ ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ʼಕಾವೇರಿʼ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಮಾತನಾಡಿದ ಡಿಕೆಶಿ, ನಾನು ಇಂದು ಇಲ್ಲಿ, ದಕ್ಷಿಣ ಭಾರತದ ವೇದಿಕೆಯಲ್ಲಿ ಒಬ್ಬ ಹೆಮ್ಮೆಯ ಭಾರತೀಯನಾಗಿ ಮತ್ತು 16 ಶತಮಾನಗಳಿಗೂ ಹೆಚ್ಚು ಸುದೀರ್ಘ ಇತಿಹಾಸವನ್ನು ಹೊಂದಿರುವ ಭಾಷೆ ಹಾಗೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಹೆಮ್ಮೆಯ ಕನ್ನಡಿಗನಾಗಿ ಮಾತನಾಡುತ್ತಿದ್ದೇನೆ. ಇವತ್ತಿನ ನನ್ನ ಮಾತುಗಳು ಕರ್ನಾಟಕಕ್ಕಾಗಿ ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಹಿತಾಸಕ್ತಿಗೆ ಶಕ್ತಿ ತುಂಬುವುದು ಕೂಡ ಆಗಿದೆ ಎಂದಿದ್ದಾರೆ.
ಭಾರತದ ಅಭಿವೃದ್ಧಿಯ ತೇರು ದಕ್ಷಿಣ ಭಾರತ ಮೂಲಕವೇ ಸಾಗುತ್ತಿತ್ತು-ಸಾಗುತ್ತಿದೆ-ಸಾಗುತ್ತದೆ. ದಕ್ಷಿಣದ ಐದು ರಾಜ್ಯಗಳ ಜನಸಂಖ್ಯೆಯು ಭಾರತದ ಒಟ್ಟು ಜನಸಂಖ್ಯೆಯ ಶೇಕಡ 20 ರಷ್ಟಿದೆ. ಆದರೆ, ನಾವು ದೇಶದ ಜಿಡಿಪಿಗೆ ಸುಮಾರು ಶೇಕಡಾ 33 ರಷ್ಟು ಕೊಡುಗೆ ನೀಡುತ್ತಿದ್ದೇವೆ. ಅಂದರೆ ದೇಶದ ಅರ್ಥ ವ್ಯವಸ್ಥೆಯಲ್ಲಿ, ಪ್ರತಿ ಮೂರು ರೂಪಾಯಿಗಳಲ್ಲಿ ಒಂದು ರೂಪಾಯಿ ದಕ್ಷಿಣ ಭಾರತದಿಂದಲೇ ಬರುತ್ತಿದೆ. ದೇಶದ ಆರ್ಥಿಕ ಶಕ್ತಿಯ ಎಂಜಿನ್‌ನಲ್ಲಿ, ಕರ್ನಾಟಕ ಅತ್ಯಂತ ಬಲವಾದ ಇಂಧನವಾಗಿದೆ, ಚಾಲನಾ ಶಕ್ತಿಯಾಗಿದೆ ಎಂದರು.
ಕರ್ನಾಟಕವು ತನ್ನ ನೆರೆಹೊರೆಯವರ ಹಕ್ಕುಗಳನ್ನು ಯಾವಾಗಲೂ ಗೌರವಿಸಿದೆ, ಮತ್ತು ಪ್ರತಿಯಾಗಿ ನಮ್ಮ ಹಕ್ಕುಗಳನ್ನು ಗೌರವಿಸಬೇಕೆಂದು ಬಯಸುತ್ತದೆ, ಅಂದರೆ ಟ್ರಿಬ್ಯೂನಲ್ ತೀರ್ಪುಗಳ ಅಡಿಯಲ್ಲಿ ನಮ್ಮ ಕಾನೂನುಬದ್ಧ ಪಾಲು ಮತ್ತು ನಮ್ಮ ರೈತರಿಗೆ ನೀರನ್ನು ಒಯ್ಯುವ ಯೋಜನೆಗಳ ಸಮಯೋಚಿತವಾಗಿ ಪೂರ್ಣಗೊಳ್ಳಬೇಕು, ಜಾರಿ ಆಗಬೇಕು ಎಂದು ನಾವು ಬಯಸುತ್ತೇವೆ. ನಮ್ಮ ನದಿಗಳ ಜೋಡಣೆಯ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆಯ ಸಮಯದಲ್ಲಿ ಕರ್ನಾಟಕದ ನಿರ್ದಿಷ್ಟ ನಿಲುವನ್ನು ನಾನು ಈ ಮಂಡಳಿಯ ಮುಂದೆ ಮಂಡಿಸುತ್ತೇನೆ. ಆದರೆ ನೀರು ಎಂಬುದು ನಾನು ಪ್ರಾರಂಭಿಸಿದ ವಿಷಯವಷ್ಟೇ, ನಮ್ಮ ಕಳಕಳಿಗಳು ಇಲ್ಲಿಗೇ ಮುಗಿಯುವುದಿಲ್ಲ ಎಂದು ಹೇಳಿದರು.



