ದೇಶದಲ್ಲಿನ ಅವೈಜ್ಞಾನಿಕ ಜಿಎಸ್‌ಟಿ ಸರಿಪಡಿಸಿಲು ನಾವು ಬದ್ಧ: ರಾಹುಲ್ ಗಾಂಧಿ

ಹೊಸದಿಗಂತ ವರದಿ, ವಿಜಯಪುರ:

ವಿದೇಶದಲ್ಲಿ ಅವೈಜ್ಞಾನಿಕ ಜಿಎಸ್‌ಟಿ ಜಾರಿಗೊಳಿಸಲಾಗಿದ್ದು, ಕರ್ನಾಟಕ ಸರ್ಕಾರ ಜಿಎಸ್‌ಟಿ ರೂಪದಲ್ಲಿ 100 ರೂ. ಕೊಟ್ಟರೆ ನಿಮಗೆ 13 ರೂ. ಮಾತ್ರ ಕೇಂದ್ರ ಸರ್ಕಾರ ವಾಪಾಸ್ಸು ನೀಡುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದಾರೆ, ಈ ಅನ್ಯಾಯವನ್ನು ಸರಿಪಡಿಸಲು ನಾವು ಬದ್ಧ ಎಂದು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಹೇಳಿದರು.

ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿಜಿ ಅವರು ಕಳೆದ 10 ವರ್ಷಗಳಲ್ಲಿ 25 ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ. ಭಾರತದ ಸಂಪತ್ತು, ಭಾರತದ ಎಲ್ಲ ಲಾಭವನ್ನು ಅದಾನಿದಂತಹ ಜನರಿಗೆ ನೀಡಿದ್ದಾರೆ, ಭಾರತ ಸೌರಶಕ್ತಿ, ಪವನಶಕ್ತಿ, ವಿಮಾನ ನಿಲ್ದಾಣ ಮೊದಲಾದವುಗಳೆಲ್ಲವೂ ಅದಾನಿಯಂತಹ ಉದ್ಯಮಪತಿಗಳ ಹಿಡಿತಕ್ಕೆ ನೀಡಿರುವುದು ದುರ್ದೈವ ಎಂದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಬಡವರಿಗೆ ಏನೂ ದೊರಕಿಲ್ಲ, ನಾವು ಪಂಚ ಗ್ಯಾರಂಟಿಗಳನ್ನು ನೀಡಿದ ಫಲವಾಗಿ ಬಡವರಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ಅವರು ಕೇವಲ 25 ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದರೆ, ನಾವು ಲಕ್ಷ ಲಕ್ಷ ಜನರಿಗೆ ಕೋಟ್ಯಾಧಿಪತಿಗಳನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿದೆ ಎಂದರು.

ಖಾಸಗಿ ವಲಯದಲ್ಲಿ, ಸಾರ್ವಜನಿಕ ವಲಯದಲ್ಲಿ, ಸರ್ಕಾರಿ ಕಚೇರಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವೇ ಯುವಕರಿಗೆ ಅಪ್ರೆಂಟಿಸ್ ತರಬೇತಿ ನೀಡುವ ದೊಡ್ಡ ಮಹತ್ವಾಕಾಂಕ್ಷೆಯನ್ನು ಇಂಡಿಯಾ ಒಕ್ಕೂಟ ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೆ ಒಂದೇ ಒಂದು ರೂ.ಗಳ ರೈತರ ಸಾಲಮನ್ನಾ ಮಾಡಿಲ್ಲ, ಎಂಎಸ್‌ಪಿ ಆಧರಿಸಿದ ದರ ನೀಡಿಲ್ಲ, ಆದರೆ ಇಂಡಿಯಾ ಒಕ್ಕೂಟ ಅಸ್ತಿತ್ವಕ್ಕೆ ಬಂದ ತಕ್ಷಣವೇ ರೈತರ ಸಾಲಮನ್ನಾ ಮಾಡುವ ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಎಂಎಸ್‌ಪಿ ಆಧರಿಸಿದ ದರ ನೀಡುವ ಸಂಕಲ್ಪ ಮಾಡಲಾಗಿದೆ ಎಂದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ದ್ವಿಗುಣ ಹಾಗೂ ನರೇಗಾ ಗೌರವಧನವನ್ನು 400 ರೂ.ಗಳಿಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಅಗ್ನಿವೀರ ಯೋಜನೆ ಭಾರತೀಯ ಸೈನ್ಯಕ್ಕೆ ಮಾಡುವ ಅಪಮಾನ, ಹೀಗಾಗಿ ಈ ಯೋಜನೆಯನ್ನು ನಾವು ರದ್ದುಗೊಳಿಸಲಿದ್ದೇವೆ, ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ವಿಂಗಡನೆ ಮಾಡುವುದಿಲ್ಲ ಎಂದರು.

ಕೋಟ್ಯಾಧಿಪತಿಗಳಿಗೆ ನೀಡುವ ಹಣವನ್ನೇ ನಾವು ದೇಶದ ಬಡಜನರಿಗೆ ಒದಗಿಸುವ ದಿವ್ಯ ಸಂಕಲ್ಪವನ್ನು ಇಂಡಿಯಾ ಒಕ್ಕೂಟ ಮಾಡಲಿದೆ ಎಂದರು.
ಮೋದಿಜಿ ಅವರು ಸಂಪೂರ್ಣ ಭಯಭೀತರಾಗಿದ್ದಾರೆ, ಹೀಗಾಗಿ ಕೆಲವೇ ದಿನಗಳಲ್ಲಿ ಮೋದಿಜಿ ಅವರಿಗೆ ವೇದಿಕೆಯಲ್ಲಿಯೇ ಕಣ್ಣೀರು ಸುರಿಸಿದರೂ ಸುರಿಸಬಹುದು, ಪಾಕಿಸ್ತಾನ, ಚೈನಾ ಮಾತು ಆಡಬಹುದು, ಮೊಬೈಲ್ ಫೋನ್ ಲೈಟ್ ಆನ್ ಮಾಡಿ ಇಲ್ಲವೇ ಚಪ್ಪಾಳೆ ಹೊಡೆಯಿರಿ ಎಂದು ಹೇಳುವ ದಿನ ದೂರವಿಲ್ಲ, ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಕೆಲಸವನ್ನು ಮಾಡಬಹುದು ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೇವಾಲಾ, ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ರಾಜು ಆಲಗೂರ, ಎಂಎಲ್‌ಸಿ ಪ್ರಕಾಶ ರಾಠೋಡ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಸಿ.ಎಸ್. ನಾಡಗೌಡ, ಅಶೋಕ ಮನಗೂಳಿ, ವಿಠ್ಠಲ ಕಟಕಧೋಂಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!