ನಮಗೆ ಓಟ್ ಬ್ಯಾಂಕ್ ಮುಲಾಜಿಲ್ಲ, ಉಗ್ರರನ್ನು ಮಟ್ಟಹಾಕುವವರೆಗೆ ವಿರಮಿಸಲ್ಲ: ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜ್ಯದ ಆರ್ಥಿಕ ಶಕ್ತಿ ಕೇಂದ್ರದಲ್ಲಿ ಕೋಮುಗಲಭೆ, ಬಯೋತ್ಪಾದನೆ ಸೃಷ್ಟಿಸುವ ಷಡ್ಯಂತ್ರ ನಡೆದಿರುವುದು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಯಲಾಗಿದೆ. ಇದನ್ನು ಮಟ್ಟಹಾಕಲು ಸರ್ಕಾರ ಸಮರ್ಥವಾಗಿದೆ ಎಂದು ಎಂದು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಂಗಳವಾರ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಮಾತನಾಡಿದ ಅವರು, ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಉಗ್ರ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಿದೆ‌ ಎಂದರು.
ಕರಾವಳಿಯಲ್ಲೇ ಒಂದು ಎನ್ ಐ ಎ ಕಚೇರಿ ಸ್ಥಾಪಿಸಬೇಕಾಗಿದೆ. ಈ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೇನೆ. ಮತ್ತೊಮ್ಮೆ ಕೇಂದ್ರ ಸರಕಾರದ ಜೊತೆ ಮಾತನಾಡುತ್ತೇನೆ ಎಂದರು. ಪಿ.ಎಫ್.ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ. ಅಲ್ಲಿಯ ತನಕ ನಮ್ಮ ಸರಕಾರಗಳು ವಿಶ್ರಮಿಸುವುದಿಲ್ಲ. ಪೊಲೀಸ್- ಇಂಟೆಲಿಜೆನ್ಸ್ ಹಾಗು ಎನ್ ಐ ಎ ಜೊತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆ ತಡೆಗಟ್ಟಬಹುದು ಎಂದರು.
ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯವಾಗಿದೆ. ನಾವು ಓಟ್ ಬ್ಯಾಂಕ್ ಗೆ ಮುಲಾಜು ಬಿದ್ದು ರಾಜಕೀಯ ಮಾಡುವುದಿಲ್ಲ, ರಾಷ್ಟ್ರ ಮತ್ತು ರಾಜ್ಯದ ಸುರಕ್ಷತೆಗೆ ನಮ್ಮ ಆದ್ಯತೆಯಾಗಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಲ್ಲ, ಬ್ಲ್ಯಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಮಟ್ಟಹಾಕುವ ಕೆಲಸ ಮಾಡುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!