ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿದ್ದರೂ, ಕರ್ನಾಟಕ ಸರ್ಕಾರ ಖರೀದಿಗೆ ಮುಂದೆ ಬರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಗತ್ಯವಿರುವ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಕೆಜಿಗೆ 28 ರೂ.ಗೆ ಮಾರಾಟ ಮಾಡಲು ಸಿದ್ಧವಿದೆ. ಈ ಬಗ್ಗೆ ತಿಂಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಈ ವಿಚಾರ ಮುಖ್ಯ ಕಾರ್ಯದರ್ಶಿಗೂ ತಿಳಿದಿದೆ. ಆಹಾರ ಸಚಿವ ಮುನಿಯಪ್ಪ ಅವರು ನನ್ನನ್ನ ಭೇಟಿ ಮಾಡಿ, ಅಕ್ಕಿ ಖರೀದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ್ದರೂ ರಾಜ್ಯ ಸರ್ಕಾರ ಅಕ್ಕಿ ಖರೀದಿಸುವ ಬದಲು ನಗದು ವರ್ಗಾವಣೆ ಮುಂದುವರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುನಿಯಪ್ಪ ಅವರ ಪುತ್ರಿ, ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಅವರು ಈಗೇಕೆ ಅವಕಾಶ ನೀಡುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷ ನಮಗೆ ಅಕ್ಕಿಯ ಅವಶ್ಯಕತೆ ಇದ್ದಾಗ ಸಿಎಂ ಸಿದ್ದರಾಮಯ್ಯ ಖುದ್ದು ಮನವಿ ಮಾಡಿದರೂ ಬೆನ್ನು ತಿರುಗಿಸಿದ್ದರು. ಹೀಗಾಗಿ ನಗದು ಹಂಚುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ. ಬಡವರಿಗಾಗಿ ಇರುವ ಯೋಜನೆಗಳನ್ನು ಯಾರೂ ರಾಜಕೀಯಗೊಳಿಸಬಾರದು ಎಂದು ತಿಳಿಸಿದ್ದಾರೆ.