July 9, 2026
Thursday, July 9, 2026
spot_img

ಕಾನೂನು ಹೋರಾಟಕ್ಕಷ್ಟೇ ನಮ್ಮ ಸಮ್ಮತಿ, ಗಡಿಭಾಗದಲ್ಲಿ ಘರ್ಷಣೆಗೆ ಆಸ್ಪದವಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಸಂಘಟನೆಗೆ ಕಾನೂನಾತ್ಮಕ ಬೆಂಬಲ ನೀಡಲು ಮುಂದಾಗಿರುವ ಮಹಾರಾಷ್ಟ್ರ ಸರ್ಕಾರದ ಧೋರಣೆಯನ್ನು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ನಾಡಿನ ಗಡಿ, ಭಾಷೆ ಹಾಗೂ ನೆಲ-ಜಲದ ರಕ್ಷಣೆಯ ವಿಷಯದಲ್ಲಿ ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾನೂನು ಚೌಕಟ್ಟಿನಲ್ಲೇ ಇರಲಿ ಹೋರಾಟ

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು ಅಥವಾ ಆಂಧ್ರಪ್ರದೇಶ ಯಾವುದೇ ಇರಲಿ, ಎಲ್ಲವೂ ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಯಬೇಕು. ಯಾರೋ ಸಂಘಟನೆಯವರು ಒತ್ತಾಯಿಸಿದರು ಅಥವಾ ಅಲ್ಲಿನ ಮುಖ್ಯಮಂತ್ರಿಗಳು ಹೇಳಿದರು ಎಂದು ಗಡಿಭಾಗದಲ್ಲಿ ತಮಗಿಷ್ಟ ಬಂದಂತೆ ಅಡ್ಡಾದಿಡ್ಡಿ ಗೆರೆ ಎಳೆಯಲು ಸಾಧ್ಯವಿಲ್ಲ ಎಂದು ಸಚಿವರು ಗುಡುಗಿದ್ದಾರೆ.

ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ: ಸಚಿವರ ಎಚ್ಚರಿಕೆ

ನೆರೆ ರಾಜ್ಯದ ನಾಯಕರು ಇದನ್ನು ಮನವಿ ಎಂದು ಭಾವಿಸುತ್ತಾರೋ ಅಥವಾ ಕಠಿಣ ಎಚ್ಚರಿಕೆ ಎಂದು ಪರಿಗಣಿಸುತ್ತಾರೋ ಅದು ಅವರಿಗೆ ಬಿಟ್ಟಿದ್ದು. ಆದರೆ, ಕರ್ನಾಟಕದ ಗಡಿಯೊಳಗೆ ಬಂದು ಸಾರ್ವಜನಿಕ ಶಾಂತಿಗೆ ಭಂಗ ತರುವುದು, ಪುಂಡಾಟಿಕೆ ನಡೆಸುವುದು ಅಥವಾ ಅನಗತ್ಯ ಘರ್ಷಣೆಗಳಿಗೆ ಪ್ರಚೋದನೆ ನೀಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !