ನಾವು ಟಿ20 ವಿಶ್ವಕಪ್‌ ಗೆಲ್ಲಲು ಇಲ್ಲಿಗೆ ಬಂದಿಲ್ಲ: ಅಚ್ಚರಿಯ ಹೇಳಿಕೆ ನೀಡಿದ ಶಕೀಬ್ ಅಲ್ ಹಸನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಭಾರತ ತಂಡ ನಾಳೆ ಬಾಂಗ್ಲಾದೇಶದ ವಿರುದ್ಧ ಆಡಲಿದ್ದು, ಸೆಮಿಫೈನಲ್ ತಲುಪಲು ಬಾಂಗ್ಲಾದೇಶದ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿದೆ.

ಆದರೆ, ಶಕೀಬ್ ಅಲ್ ಹಸನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾವು ಟಿ20 ವಿಶ್ವಕಪ್‌ ಗೆಲ್ಲಲು ನಾವು ಇಲ್ಲಿಗೆ ಬಂದಿಲ್ಲ, ಆದರೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಬಂದಿದ್ದಾರೆ. ನಾವು ಭಾರತ ತಂಡವನ್ನು ಸೋಲಿಸಿದರೆ ನಿಜಕ್ಕೂ ಒಂದು ಸಾಧನೆ ಎಂದು ಹೇಳಿದರು.
ಭಾರತ ಮತ್ತು ಬಾಂಗ್ಲಾದೇಶ ಎರಡೂ ತಂಡಗಳು ಪ್ರಸ್ತುತ ಗುಂಪು 2 ರಲ್ಲಿ 4 ಅಂಕಗಳನ್ನು ಹೊಂದಿದ್ದು, ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಹಾದಿ ಸುಲಭವಾಗಲಿದೆ.

ಪ್ರತಿಯೊಂದು ಪಂದ್ಯವೂ ನಮಗೆ ಮುಖ್ಯವಾಗಿದೆ. ನಾವು ಅದೇ ವಿಧಾನದೊಂದಿಗೆ ಆಡಲು ಬಯಸುತ್ತೇವೆ. ಯಾವುದೇ ವಿರೋಧದ ಮೇಲೆ ನಮ್ಮ ಗಮನ ನೀಡುವುದಿಲ್ಲ. ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿ ಆಡಲು ಬಯಸುತ್ತೇವೆ ಎಂದು ಅವರು ಹೇಳಿದರು.

ಈ ವಿಶ್ವಕಪ್‌ನಲ್ಲಿ ನಾವು ಆಟದ ಎಲ್ಲಾ ವಿಭಾಗಗಳಲ್ಲಿ ಸಂಪೂರ್ಣ ತಂಡದ ಪ್ರದರ್ಶನ ನೀಡುವತ್ತ ಗಮನಹರಿಸಿದ್ದೇವೆ. ಭಾರತದ ವಿರುದ್ಧದ ಪಂದ್ಯದಲ್ಲೂ ಅದನ್ನೇ ಮಾಡಲಿದ್ದೇವೆ ಎಂದು ಶಕೀಬ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಾವು ನಮ್ಮ ಉಳಿದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಲು ಬಯಸುತ್ತೇವೆ. ನಾವು ಭಾರತ ಅಥವಾ ಪಾಕಿಸ್ತಾನದ ವಿರುದ್ಧ ಗೆಲ್ಲಲು ಸಾಧ್ಯವಾದರೆ, ಅದು ಆ ತಂಡಗಳಿಗೆ ಆಘಾತ ನೀಡಿದಂತಾಗುತ್ತದೆ. ಎರಡೂ ತಂಡಗಳು ನಮಗಿಂತ ಉತ್ತಮವಾಗಿವೆ. ನಾವು ಉತ್ತಮವಾಗಿ ಆಡಿದರೆ, ಆ ದಿನ ನಮ್ಮದಾಗಿದ್ದರೆ ನಾವು ಗೆಲ್ಲಬಹುದು ಎಂದು ಹೇಳಿದರು.

ಐರ್ಲೆಂಡ್ ಮತ್ತು ಜಿಂಬಾಬ್ವೆಯಂತಹ ತಂಡಗಳು ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಸೋಲಿಸುವುದನ್ನು ನಾವು ನೋಡಿದ್ದೇವೆ. ನಾವು ಅದೇ ರೀತಿ ಮಾಡಲು ಸಾಧ್ಯವಾದರೆ, ಸಂತೋಷಪಡುತ್ತೇನೆ ಎಂದು ಶಕೀಬ್ ಹೇಳಿದ್ದಾರೆ.

ಇನ್ನು ಭಾರತ ತಂಡ ಎಲ್ಲೇ ಆಡಿದರೂ ಅದಕ್ಕೆ ಉತ್ತಮ ಬೆಂಬಲ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ಟೇಡಿಯಂ ಕಿಕ್ಕಿರಿದು ತುಂಬಿರುತ್ತದೆ, ಇದು ಉತ್ತಮ ಪಂದ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!