ಹೊಸದಿಗಂತ ವರದಿ,ಬಾಗಲಕೋಟೆ :
ರಾಜ್ಯದಲ್ಲಿನ ನೇಕಾರರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸದ್ಯಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನವನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದಅವರು ರಾಜ್ಯದಲ್ಲಿ ೭೦ ಸಾವಿರ ಜನ ನೇಕಾರರು ಇದ್ದಾರೆ ಎಂಬ ಮಾಹಿತಿ ಇದೆ.ನೇಕಾರರ ಉತ್ಪನ್ನಗಳ ಮೇಲೆ ಟ್ಯಾಕ್ಸ್ ಸಂಗ್ರಹ ಮಾಡಿ ಮುಂಬರುವ ದಿನಗಳಲ್ಲಿ ನೇಕಾರರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಕೆಲಸ ಮಾಡುತ್ತೇವೆ. ನೇಕಾರರಿಗೆ ನ್ಯಾಯ ಒದಗಿಸುವ ಸಲುವಾಗಿ ಶೀಘ್ರದಲ್ಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು ಎಂದರು.
ಟ್ರಾನ್ಸ್ ಪೋರ್ಟ್ ದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಕೊಡಲು ಕಾರ್ಯಕ್ರಮ ರೂಪಿಸಲಾಗಿದೆ. ೫೦ ಲಕ್ಷ. ಜನ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಿದ್ದೇವೆ ಎಂದರು.
ರಾಜ್ಯದಲ್ಲಿ ೧೩೭ ಬಾಲಕಾರ್ಮಿಕ ಶಾಲೆಗಳು ಇದ್ದು ಈ ಶಾಲೆಗಳಿಗೆ ಕಟ್ಟಡ ಕಾರ್ಮಿಕರ ಮಕ್ಕಳು ಬರಲು ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಆದರೆ ಪ್ರತಿಯೊಂದು ಊರು,ನಗರಗಳಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಅಲ್ಲಿ ಮಕ್ಕಳು ಹೋಗುತ್ತಿದ್ದಾರೆ. ಹೀಗಾಗಿ ಕೆಲವೊಂದು ಕಡೆ ಬಾಲಕಾರ್ಮಿಕ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಅವುಗಳನ್ನು ಮುಚ್ಚುವ ಚಿಂತನೆ ನಡೆದಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಿಗಳನ್ನು ಜಾತಿಯಿಂದ ನೋಡಿಕೊಳ್ಳುತ್ತಿಲ್ಲ. ಬುದ್ದ, ಬಸವ, ಅಂಬೇಡ್ಕರ್ ಅವರ ಸಿದ್ದಾಂತದ ಮೇಲೆ ಎಲ್ಲರಿಗೂ ಸಮಪಾಲು ಎಂಬಂತೆ ಸರ್ಕಾರ ಕೆಲಸ ಮಾಡುತ್ತಿದೆ. ಶ್ಯಾಮನೂರ ಶಿವಶಂಕರವರು ಆ ರೀತಿ ಹೇಳಿಕೆ ಕೊಡಬಾರದಿತ್ತು. ಅವರ ಆರೋಪ ಸುಳ್ಳು ಎಂದರು.
ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನಮ್ಮ ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ಪಕ್ಷದ ಹೈ ಕಮಾಂಡ್ ಆ ವಿಷಯ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಶಾಸಕ ಜೆ.ಟಿ.ಪಾಟೀಲ, ಕಾಂಗ್ರೆಸ್ ಜಿಲ್ಲಾ ಎಸ್.ಜಿ.ನಂಜಯ್ಯನಮಠ ,ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಕಾಂಗ್ರೆಸ್ ಎಸ್ಸಿ ಘಟಕ್ ಅಧ್ಯಕ್ಷ ರಾಜು ಮನ್ನಿಕೇರಿ, ನಗರಸಭೆ ಸದಸ್ಯ ಲಕ್ಷ್ಮಣ ಮುಚಖಂಡಿ, ಹಾಜೀಸಾಬ್ ದಂಡಿನ, ಆನಂದ ಜಿಗಜಿನ್ನಿ ಇದ್ದರು.