ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್- ರಷ್ಯಾ ನಡುವಿನ ಸಂಘರ್ಷದ ಕುರಿತು ವಿಶ್ವಸಂಸ್ಥೆಯಲ್ಲಿನ ಭಾರತದ ನಿಲುವನ್ನು ನಾವು ಟೀಕಿಸಿಲ್ಲ ಎಂದು ಜರ್ಮನ್ ರಾಯಭಾರಿ ವಾಲ್ಟರ್ ಜೆ. ಲಿಂಡ್ನರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯುದ್ಧ ರಾಷ್ಟ್ರಗಳ ಸಂಘರ್ಷದ ವಿಚಾರವಾಗಿ ಭಾರತ ಅಥವಾ ಯಾವುದೇ ರಾಷ್ಟ್ರಗಳು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಒತ್ತಡ ಹೇರಿಲ್ಲ. ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದಾರೆ.
ಯಾವುದೇ ರಾಷ್ಟ್ರ ತನ್ನ ದೊಡ್ಡ ಸೈನ್ಯದೊಂದಿಗೆ ನೆರೆ ರಾಷ್ಟ್ರದ ಮೇಲೆ ಆಕ್ರಮಣ ಮಾಡಲು, ಸಾವು-ವಿನಾಶಕ್ಕೆ ಕಾರಣವಾಗುವ ಅಧಿಕಾರ ಇಲ್ಲ. ಇನ್ನು ಈ ಪರಿಸ್ಥಿತಿಯನ್ನು ನೋಡುತ್ತ ಇಡೀ ವಿಶ್ವ ಸುಮ್ಮನಿರುವಂತಿಲ್ಲ ಎಂದು ಅಭಿಪ್ರಾಯಪಟ್ಟರು.
ಇನ್ನು ನ್ಯಾಟೋ ಸದಸ್ಯತ್ವದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಸುಳ್ಳು ಆರೋಪ ಮಾಡುವ ಮೂಲಕ ಉಕ್ರೇನ್ ಮೇಲೆ ವಿನಾಕಾರಣ ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ಸೋವಿಯತ್ ಯೂನಿಯನ್ ನ ಪತನದ ನಂತರ ಎಲ್ಲಾ ಯೂರೋಪಿಯನ್ ರಾಷ್ಟ್ರಗಳು ಸ್ವಿಚ್ಛೆಯಿಂದ ನ್ಯಾಟೋಗೆ ಸೇರಿದ್ದರು. ನ್ಯಾಟೋ ಯಾರ ಮೇಲೆಯೂ ಒತ್ತಡ ಹೇರಿಲ್ಲ ಎಂದಿದ್ದಾರೆ.
ಯಾವುದೇ ಸಾರ್ವಭೌಮ ರಾಷ್ಟ್ರದ ಮೇಲೆ ಆಕ್ರಮಣ ಮಾಡುವ ಮೂಲಕ ಗಡಿ ಸಮಸ್ಯೆ ಬಗೆಹರಿಯುವುದಿಲ್ಲ. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದ್ದಾರೆ.