ಹೊಸ ದಿಗಂತ ವರದಿ, ಚಿತ್ರದುರ್ಗ:
ಫೇಸ್‌ಬುಕ್‌ನಲ್ಲಿ ಕೆಲವು ವಿಚಾರಗಳು ಹರಡುತ್ತಿರುವುದು ನಮ್ಮ ಮನಸ್ಸಿಗೆ ನೋವುಂಟಾಗಿದೆ ಎಂದು ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ದುಃಖ ತೋಡಿಕೊಂಡರು.
ನಗರದ ತುರುವನೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಟ ದರ್ಶನ್ ಮನೆಗೆ ಹೋಗಿದ್ದೆವು. ದರ್ಶನ್ ನಮ್ಮ ಮನೆಗೆ ಬಂದಿದ್ದ ಎಂಬ ಸುದ್ದಿ ಫೇಸ್‌ಬುಕ್‌ನಲ್ಲಿ ಕೆಲವರು ಹರಡುತ್ತ ನಮ್ಮ ಕುಟುಂಬವನ್ನು ಕೆದಕಿ ನೋವುಂಟು ಮಾಡುತ್ತಿದ್ದಾರೆ. ನಾವು ಯಾರನ್ನು ಭೇಟಿಯಾಗಿಲ್ಲ. ಹೊಸ ಕಾರ್ ಬುಕ್ ಮಾಡಿದ್ದೇವೆಂಬ ವಿಚಾರಗಳು ಸುಳಿದಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಗನನ್ನು ಕಳೆದುಕೊಂಡಿರುವ ನಾವುಗಳು ಕಾರ್ ತೆಗೆದುಕೊಂಡು ಏನು ಮಾಡುವುದು. ನಮ್ಮ ಸೊಸೆಗೆ ನೌಕರಿ ನೀಡಿ ಎಂದು ಸರ್ಕಾರವನ್ನು ಕೇಳಿದ್ದೇವೆ. ನೌಕರಿ ಕೊಡಲು ಬರುವುದಿಲ್ಲವೆಂದು ಸರ್ಕಾರದ ಕಡೆಯಿಂದ ನಮಗೆ ಉತ್ತರ ಬಂದಿದೆ. ಒಂದು ವೇಳೆ ಸರ್ಕಾರ ನೌಕರಿ ಕೊಡದಿದ್ದರೆ ರೇಣುಕಾಸ್ವಾಮಿ ಪತ್ನಿ ಹಾಗೂ ಮಗು ಬೀದಿ ಪಾಲಾಗುತ್ತಾರೆ. ನಮ್ಮ ಮನವಿಯನ್ನು ಸರ್ಕಾರ ಪುನರ್ ಪರಿಶೀಲಿಸಿ ಸರ್ಕಾರಿ ನೌಕರಿ ಕೊಡುವಂತೆ ಕಾಶಿನಾಥ ಶಿವನಗೌಡ್ರು ಮನವಿ ಮಾಡಿದರು.
ರೇಣುಕಾಸ್ವಾಮಿ ಚಿಕ್ಕಪ್ಪ ಎಸ್.ಷಡಾಕ್ಷರಯ್ಯ ಮಾತನಾಡಿ, ಫೇಸ್‌ಬುಕ್‌ನಲ್ಲಿ ಎಲ್ಲೆಡೆ ಹರಡುತ್ತಿರುವ ಫೇಕ್ ಸುದ್ದಿಯಿಂದ ನಮ್ಮ ಮನಸ್ಸಿಗೆ ನೋವಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಾಕಷ್ಟು ಒಳ್ಳೆ ಕೆಲಸ ಮಾಡಿರುವುದು ಸಮಾಧಾನ ತಂದಿದೆ. ಟ್ರಯಲ್ ಕೋರ್ಟ್‌ನಿಂದ ಫಾಸ್ಟ್ ಟ್ರಾಕ್‌ಗೆ ವರ್ಗಾಯಿಸಿ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕೆಂದು ಕೇಳಿದ್ದೇವೆ. ಅವಕಾಶವಿಲ್ಲವೆಂದು ಸರ್ಕಾರ ಹೇಳಿದೆ. ನಮ್ಮ ಮನವಿಯನ್ನು ಪುನರ್ ಪರಿಶೀಲಿಸಿ ನೌಕರಿ ಕೊಡುವಂತೆ ವಿನಂತಿಸಿದರು.
ರೇಣುಕಾಸ್ವಾಮಿ ತಾಯಿ ಪತ್ರಿಕಾಗೋಷ್ಠಿಯಲಿ ಹಾಜರ‍್ಲಿದ್ದರು.