ಹೊಸದಿಗಂತ ವರದಿ, ಮೈಸೂರು:
ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣ ಮಾಡಲೆಂದು ರಾಜ್ಯ ಸರ್ಕಾರ ಲಾಕ್ ಡೌನ್ ಜಾರಿಗೆ ತರುವ ಮೂಲಕ ಜ.9ರಂದು ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸಲಿರುವ ಪಾದಯಾತ್ರೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಮೈಸೂರಿನಲ್ಲಿ ಇಂದು ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ ಡೌನ್ ಮಾಡುವಂತಹ ಪರಿಸ್ಥಿತಿ ಇಲ್ಲ, ಆ ಮಟ್ಟದಲ್ಲಿ ಕೊರೋನಾ ಸೋಂಕು ಹರಡುತ್ತಿಲ್ಲ, ಆದರೆ ಕಾಂಗ್ರೆಸ್ ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಲಾಕ್ ಡೌನ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಸರ್ಕಾರದ ಈ ನಡೆಯನ್ನು ನಾವು ಗಮನಿಸಿ ಒಂದು ಲಕ್ಷ ಮಾಸ್ಕ್ ಗೆ ಆರ್ಡರ್ ಮಾಡಿದ್ದೇವೆ. ನೂರು ಮಂದಿ ಡಾಕ್ಟರ್ ತಂಡ ರಚಿಸಿದ್ದೇವೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಹೀಗಿದ್ದರೂ ನಮ್ಮ ಮೇಲೆ ಯಾವುದೇ ಕೇಸ್ ಹಾಕಿ, ಜೈಲಿಗೆ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡಿದರೂ, ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಗುಡುಗಿದರು.
ಪಾದೆಯಾತ್ರೆಯಲ್ಲಿ ಭಾಗವಹಿಸುವ ಸುಮಾರು ಐದು ಸಾವಿರ ಜನರಿಗೆ ಆಯಾ ಸ್ಥಳಗಳ ಶಾಲೆ, ಕಲ್ಯಾಣ ಮಂಟಪಗಳು, ಮಠಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕೆ ಹೇಗೆ ಅನುಕೂಲವಾಗಲಿದೆಯೋ, ಅದಕ್ಕಿಂತ ಹೆಚ್ಚಿನ ಅನುಕೂಲ ತಮಿಳುನಾಡಿಗೆ ಆಗಲಿದೆ. ಇದನ್ನು ಅಲ್ಲಿನ ಜನರು, ರಾಜಕಾರಣಿಗಳು, ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಯೋಜನೆಗೆ ಕ್ಯಾತೆ ತೆಗೆಯುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದರು.