ನಾವೂ ಶ್ರೀರಾಮಚಂದ್ರನ ಭಕ್ತ…ಸಮಯ ದೊರೆತಾಗ ಅಯೋಧ್ಯೆಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಾವೂ ಶ್ರೀರಾಮಚಂದ್ರನ ಭಕ್ತ. ಸಮಯ ದೊರೆತಾಗ ಅಯೋಧ್ಯೆಗೆ ನಾನು ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಶ್ರೀ ಸೀತಾ, ರಾಮ, ಲಕ್ಷ್ಮಣ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ನವರು ಶ್ರೀರಾಮನ ವಿರುದ್ಧ ಇದ್ದಾರೆ ಎಂದು ಅಪಪ್ರಚಾರ ಮಾಡುವುದನ್ನು ನಾವು ಖಂಡಿಸುತ್ತೇವೆ. ರಾಮಮಂದಿರವನ್ನು ರಾಜಕೀಯಗೊಳಿಸಬಾರದು. ಶ್ರೀರಾಮಚಂದ್ರ ಎಲ್ಲರ ದೇವರು. ಕೇವಲ ಬಿಜೆಪಿಯವರ ದೇವರಲ್ಲ. ಎಲ್ಲಾ ಹಿಂದುಗಳ ದೇವರು. ನಾವೂ ಶ್ರೀರಾಮಚಂದ್ರನ ಭಕ್ತರೇ. ಶ್ರೀರಾಮಚಂದ್ರನಿಗೆ ವಿರುದ್ಧವಾಗಿದ್ದೇವೆ ಎಂದು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈ ಅಪಪ್ರಚಾರ ಮಾಡುವುದು ಸರಿಯಲ್ಲ.ಇಂದು ಶ್ರೀ ರಾಮ ಟೆಂಪಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀರಾಮ ದೇವಸ್ಥಾನವನ್ನು ಇದರೊಂದಿಗೆ ಆಂಜನೇಯ ವಿಗ್ರಹವನ್ನೂ ಉದ್ಘಾಟಿಸಿದ್ದೇನೆ. ಇದನ್ನು ನಾವು ರಾಜಕಾರಣಕ್ಕಾಗಿ ಮಾಡಿರುವುದಲ್ಲ. ಕರ್ನಾಟಕ ರಾಜ್ಯದಲ್ಲಿ ಶ್ರೀರಾಮಚಂದ್ರನ ಬಹಳಷ್ಟು ದೇವಸ್ಥಾನಗಳಿವೆ. ನಮ್ಮೂರಿನಲ್ಲಿಯೂ ನಾನೇ ಶ್ರೀರಾಮಚಂದ್ರನ ದೇವಸ್ಥಾನವನ್ನು ಕಟ್ಟಿಸಿದ್ದೇನೆ. ಇದರಲ್ಲಿ ರಾಜಕೀಯ ಇಲ್ಲ. ಸಮಯ ದೊರೆತಾಗ ಅಯೋಧ್ಯೆಗೆ ನಾನು ಹೋಗುತ್ತೇನೆ ಎಂದರು.

ಶ್ರೀರಾಮಚಂದ್ರನ ಮೂರ್ತಿ ಎಲ್ಲೆಡೆ ಒಂದೇ. ಅಯೋಧ್ಯೆಯಲ್ಲಿ ಮಾಡಿದರೂ ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರೂ ಒಂದೇ. ಬಿಜೆಪಿಯವರು ಅಯೋಧ್ಯೆಯಲ್ಲಿ ರಾಮನನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ರಾಮ, ಆಂಜನೇಯ, ಸೀತೆ ಲಕ್ಷ್ಮಣನನ್ನು ಬೇರ್ಪಡಿಸಲಾಗುವುದಿಲ್ಲ. ಶ್ರೀರಾಮಚಂದ್ರ ಒಬ್ಬನೇ ಇರದೇ ಸೀತಾದೇವಿ, ಲಕ್ಷ್ಮಣ, ಆಂಜನೇಯ ಇದ್ದಾಗ ಮಾತ್ರ ಪರಿಪೂರ್ಣವಾಗುತ್ತದೆ. ಇವರು ಶ್ರೀರಾಮಚಂದ್ರನನ್ನೇ ಬೇರ್ಪಡೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸರಿ ಇಲ್ಲ.
ಮಹಾತ್ಮಾ ಗಾಂಧೀಜಿಯವರು ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದು, ಸಾಯುವಾಗಲೂ ಹೇ ರಾಮ್ ಎಂದೇ ಜೀವ ಬಿಟ್ಟರು. ಕಾಂಗ್ರೆಸ್ ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!