ಹೊಸದಿಗಂತ ವರದಿ, ಹಾವೇರಿ:
ಕೋವಿಡ್ ಮುಂಚೂಣಿಯ ಕಾರ್ಯಕರ್ತರಿಗೆ, ೬೦ ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವರಿಗೆ ಮುನ್ನೆಚ್ಚರಿಕೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ನೆಹರು ಓಲೇಕಾರ ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಿದರು.
ಸೋಮವಾರ ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಮತ್ತು ಜಿಲ್ಲಾಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಕಾರ್ಯಾಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಲ್ಲಾಸ್ಪತ್ರೆಗೆ ಮಂಜೂರಾದ ನೂತನ ಅಂಬುಲೆನ್ಸ್ ಸಾರ್ವಜನಿಕ ಸೇವೆಗೆ ಶಾಸಕ ನೆಹರು ಓಲೇಕಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಜನರ ರಕ್ಷಣೆ ಮಾಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ೩ನೇ ಡೋಸ್ ಮುನ್ನಚ್ಚರಿಕೆ ಲಸಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲೂ ಬೂಸ್ಟರ್ ಡೋಸ್ ಲಸಿಕೆ ಹಾಕುವ ಕಾರ್ಯಕ್ರಮ ಇಂದು ಚಾಲನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ೧೫ ರಿಂದ ೧೮ ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಿದ್ದು, ಶೇ.೬೫ ರಷ್ಟು ಪ್ರಗತಿಯಾಗಿದೆ. ಸಾಮಾನ್ಯ ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ ಮೊದಲನೇ ಡೋಸ್ ಶೇ.೯೫.೫೮ ರಷ್ಟು ಹಾಗೂ ಎರಡನೇ ಡೋಸ್ ಶೇ.೭೦.೦೮ ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಆರೋಗ್ಯ ಸೇವೆ ಉತ್ತಮಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಸ್ಪತ್ರೆಗೆ ೩ ಅಂಬ್ಯುಲೆನ್ಸ್ ಮಂಜೂರು ಮಾಡಿದ್ದು, ಒಂದು ಅಂಬ್ಯುಲೆನ್ಸ್ ಪೂರೈಕೆಯಾಗಿದ್ದು, ಇಂದು ಸಾರ್ವಜನಿಕ ಸೇವೆ ಬಳಕೆಗೆ ನೀಡಲಾಗಿದೆ. ಶೀಘ್ರವೇ ಎರಡು ಅಂಬ್ಯುಲೆನ್ಸ್ ಬರಲಿವೆ. ನರ್ಸಿಂಗ್ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಿಕೊಡಲು ೩ ಕೋಟಿ ರೂವೆಚ್ಚದ ಕಟ್ಟಡಕ್ಕೆ ಮಂಜೂರಾತಿ ನೀಡಿದ್ದಾರೆ. ಹೆಚ್ಚುವರಿ ವೈದ್ಯಕೀಯ ಉಪಕರಣಗಳ ಪೂರೈಕೆಗೆ ಒಪ್ಪಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ೩ನೇ ಅಲೆ ಆರಂಭಗೊಂಡಿವೆ ಭಾನುವಾರ ಜಿಲ್ಲೆಯಲ್ಲಿ ೮ ಪ್ರಕರಣಗಳು ದಾಖಲಾಗಿವೆ. ೩ನೇ ಅಲೆ ಉಲ್ಬಣವಾಗದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜ್ವರ, ನೆಗಡಿ, ಕೆಮ್ಮು ಶೀತ ಬಂದರೆ ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಹೋಗದೆ ಕಡ್ಡಾಯವಾಗಿ ಮೊದಲು ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿಕೊಂಡರು.
ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳಾದ ಕುಮಾರ ಹಾಗೂ ರವಿ ಅವರಿಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಖಹೆಚ್‌ಒ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಕಾರ ಕುಂದೂರ, ಜಿಲ್ಲಾ ಆರೋಗ್ಯ ರಕ್ಷಣಾ ಸಮಿತಿಯ ಅಧಿಕಾರೇತರ ಸದಸ್ಯರಾದ ಮಂಜುನಾಥ ಇಟಗಿ, ಚನ್ನಮ್ಮ ಪಾಟೀಲ, ಪಾರ್ವತೆಮ್ಮ ಪಾಟೀಲ ಹಾಗೂ ಇತರ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.