ಹೊಸದಿಗಂತ ವರದಿ, ಧಾರವಾಡ:
ಬೆಳಗಾವಿ ಅಧಿವೇಶದಲ್ಲಿ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದು ಸತ್ಯ. ಕೊನೆಯ ಎರಡು ಎರಡು ದಿನ ಮಾತ್ರ ಚರ್ಚೆಗೆ ಅವಕಾಶ ನೀಡಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಅಧಿವೇಶನದಲ್ಲಿ ಮೊದಲ ನಾಲ್ಕು ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಒತ್ತಾಯ ಮಾಡಿದರು.
ಉತ್ತರ ಕರ್ನಾಟಕಕ್ಕೆ ಮೊದಲೇ ಸಮಯ ಕೊಡಲು ಸಭಾಪತಿ ಕೇಳಿದರೂ ಕೊಡಲಿಲ್ಲ. ಕಾಂಗ್ರೆಸ್ ನಾಯಕರಿಗೆ ಚಚೆಯೇ ಬೇಡವಾಗಿತ್ತು. ಹೀಗಾಗಿ ಉದ್ದೇಶಪೂರ್ವಕ ಸದನದ ಸಮಯ ಹಾಳು ಮಾಡಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಎಂಟೆoಟು ತಾಸು ಮಾತಾಡಿದ್ದು, ಅವರ ಶಾಸಕರಿಗೂ ಅವಕಾಶ ಕೊಡುವುದಿಲ್ಲ. ಇದು ದುರಂತ. ಹಾಡಿದ್ದು ಹಾಡೋ, ಕಿಸಬಾಯಿದಾಸ ಅನ್ನುವಂತೆ ಸಿದ್ದರಾಮಯ್ಯ ಹೇಳಿದ್ದನ್ನೇ ಪುನಃ ಹೇಳುತ್ತಾರೆ ಎಂದರು.
ಬರೀ ಟಿಪ್ಪು ಸುಲ್ತಾನ್ ವರ್ಣನೆ ಮಾಡುತ್ತಾರೆ. ಅದು ಬಿಟ್ಟರೇ ಬೇರೆ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ವರ್ಣನೆಯಲ್ಲೆ ಕಾಂಗ್ರೆಸ್ ಹಾಳಾಗುತ್ತಿದೆ. ಪಾದಯಾತ್ರೆಯಿಂದಲೂ ಇವರ ಬಣ್ಣ ಬಯಲಾಗುತ್ತಿದೆ ಎಂದು ಹರಿಹಾಯ್ದರು.