ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸದ್ಯ ಮುಂಗಾರು ಮಳೆ ಕೊಂಚ ಬಿಡುವು ಪಡೆದುಕೊಂಡಿದ್ದರೂ, ಮಳೆಗಾಲ ಸಂಪೂರ್ಣವಾಗಿ ಇನ್ನು ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಷ್ಟೆ ಅಲ್ಲದೇ, ಹಲವೆಡೆ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳಿವೆ ಎಂದು ಕೂಡ ಎಚ್ಚರಿಸಿದೆ.
ಕರಾವಳಿಯಲ್ಲಿ ಸೆ.10ರ ನಂತರ ಮಳೆ
ಕರಾವಳಿಯ ಬಹುತೇಕ ಕಡೆ ಸದ್ಯ ಬಿಸಿಲು ಮತ್ತು ಮೋಡದ ಕಣ್ಣಾಮುಚ್ಚಾಲೆ ಮುಂದುವರಿಯಲಿದೆ. ಕೆಲವೆಡೆ ತುಂತುರು ಮಳೆಯಾಗಬಹುದು. ಆದರೆ, ಸೆ. 8ಅಥವಾ 9 ರಿಂದ ವಾತಾವರಣ ಬದಲಾಗಲಿದ್ದು, ಸೆ.10ರ ನಂತರ ಕರಾವಳಿಯ ಭಾಗದಲ್ಲಿ ಗುಡುಗು ಸಹಿತ ಭರ್ಜರಿ ಮಳೆಯಾಗುವ ನಿರೀಕ್ಷೆಯಿದೆ.
ಮೋಡ ಕವಿದ ವಾತಾವರಣ
ಮಲೆನಾಡಿನಲ್ಲಿ ಸಂಜೆ ವೇಳೆ ಒಂದೆರಡು ಕಡೆ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ. ಶಿವಮೊಗ್ಗದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ನಂತರದ ದಿನಗಳಲ್ಲಿ ಮಲೆನಾಡಿನಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಬಹುದು.
ಒಂದೆರಡು ಕಡೆ ಸಾಧಾರಣ ಮಳೆ
ಇನ್ನು, ಉತ್ತರ ಒಳನಾಡು ಭಾಗಗಳಲ್ಲಿ ಬಾಗಲಕೋಟೆಯ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಬಿಸಿಲು ಮುಂದುವರಿಯಲಿದೆ. ಆದರೆ, ಸೆಪ್ಟೆಂಬರ್ 10ರವರೆಗೆ ಕಲ್ಯಾಣ ಕರ್ನಾಟಕವನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ. ಅದೇ ರೀತಿ ದಕ್ಷಿಣ ಒಳನಾಡಿನಲ್ಲಿ ಮುಂದಿನ 10ದಿನ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ರಾಷ್ಟ್ರರಾಜಧಾನಿಯಲ್ಲಿ ಮಳೆ ಅಬ್ಬರ
ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಿನ್ನೆ ಸಂಜೆ ವೇಳೆ ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಕೆಲವಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾದರೆ, ನಿರಂತರ ಮಳೆಯಿಂದಾಗಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಜಲಾವೃತಗೊಂಡಿದೆ. ಇದರಿಂದ ಹಲವು ವಿಮಾನಗಳ ಹಾರಾಟ ವಿಳಂಬವಾಗಿದ್ದು, ಕೆಲವು ವಿಮಾನಗಳನ್ನು ಬೇರೆ ನಗರಗಳಿಗೆ ತಿರುಗಿಸಲಾಗಿದೆ.
ಇಂದೂ ಕೂಡ ನಗರದಲ್ಲಿ ಗುಡುಗು, ಮಿಂಚು ಹಾಗೂ 50-60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.



