ಹೊಸದಿಗಂತ ವರದಿ, ಅಂಕೋಲಾ:
ವಾರಾಂತ್ಯದ ಕರ್ಫ್ಯೂ ನಿಮಿತ್ತ ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಕಿರಾಣಿ, ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಕಿರಾಣಿ ವ್ಯಾಪಾರಿಗಳೂ ಅಂಗಡಿಗಳನ್ನು ಮುಚ್ಚಿರುವುದು ಕಂಡು ಬಂತು.
ಕೆಲವು ಹೊಟೇಲುಗಳಲ್ಲಿ ಪಾರ್ಸಲ್ ಸೇವೆ ನೀಡಲಾದರೂ ಬಹಳಷ್ಟು ಹೊಟೇಲುಗಳೂ ಮುಚ್ಚಿದ್ದವು.
ಇನ್ನುಳಿದಂತೆ ಬೀದಿ ಬದಿ ತರಕಾರಿ ಮಾರಾಟ, ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಯಿತಾದರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಲಿಲ್ಲ.
ದಂಡದ ಬಿಸಿ
ಬೆಳಿಗ್ಗೆಯಿಂದಲೇ ಪುರಸಭೆ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಅವರು ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು, ಮಾಸ್ಕ್ ಧರಿಸದೇ ಓಡಾಡುವ ಪ್ರತಿಯೊಬ್ಬರಿಗೂ ಯಾವುದೇ ಮುಲಾಜಿಲ್ಲದೇ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿ ಮಾಸ್ಕ್ ಸಹ ನೀಡುವ ಮೂಲಕ ಜಾಗ್ರತೆ ವಹಿಸುವಂತೆ ಸೂಚಿಸಲಾಯಿತು.
ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಸಿಬ್ಬಂದಿಗಳು ಸಹಕಾರ ನೀಡಿದರು.
ಅದೇ ರೀತಿ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ಮಾರುಕಟ್ಟೆಗೆ ಅನಗತ್ಯವಾಗಿ ಸುತ್ತಾಡುವುದನ್ನು ತಡೆಯಲು ಪ್ರತಿ ವಾಹನಗಳನ್ನು ತಡೆದು ಮಾರುಕಟ್ಟೆಗೆ ಬಂದ ಕಾರಣ ವಿಚಾರಿಸಿದರಲ್ಲದೇ ಅನಗತ್ಯವಾಗಿ ಬಂದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.
ತಹಶೀಲ್ಧಾರ ಉದಯ ಕುಂಬಾರ ಮಾರುಕಟ್ಟೆಯಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಶನಿವಾರ ನಡೆಯಬೇಕಿದ್ದ ವಾರದ ಸಂತೆ ಸಹ ರದ್ದುಗೊಂಡಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಸಂಚಾರ ಕಂಡು ಬಂದಿಲ್ಲ.