ಹೊಸದಿಗಂತ ವರದಿ ಧಾರವಾಡ:
ರಾಜ್ಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಮುಗಿದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭ್ಯರ್ಥಿಗಳು ಹಾಗೂ ಬೆಂಬಲಿಗರಿಗೆ ಮಂಗಳವಾರ ನಿರಾಸೆ ಎದುರಾಗಿದೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಮತ ಎಣಿಕೆ ಪ್ರಕ್ರಿಯೆ ತೀವ್ರ ವಿಳಂಬವಾಗಿದ್ದು, ಎಣಿಕೆ ಕೇಂದ್ರದಲ್ಲಿ ನೀರವ ಮೌನ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಧ್ಯಾಹ್ನವಾದರೂ ಸಿಗದ ಸ್ಪಷ್ಟತೆ!
ಚುನಾವಣಾಧಿಕಾರಿ ಕೆ.ಎಂ. ಜಾನಕಿ, ನಾಲ್ಕೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಬೆಳಗ್ಗೆ 7.55ಕ್ಕೆ ಅತ್ಯಂತ ಬಿಗಿ ಭದ್ರತೆಯ ನಡುವೆ ಭದ್ರತಾ ಕೊಠಡಿ ತೆರೆಯಲಾಯಿತು. ಬೆಳಗ್ಗೆ 8 ಗಂಟೆಗೆ ಬಂಡ್ಲಿಂಗ್ ಕಾರ್ಯ ಪ್ರಾರಂಭವಾದರೂ, ಅಧಿಕಾರಿಗಳ ಮಂದಗತಿಯಿಂದ ಮಧ್ಯಾಹ್ನ 1 ಗಂಟೆಯಾದರೂ ಬಂಡ್ಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ. ಪರಿಣಾಮ, ನಿಗದಿತ ಸಮಯಕ್ಕೆ ಆರಂಭವಾಗಬೇಕಿದ್ದ ಮತ ಎಣಿಕೆ ಕಾರ್ಯ ಮಧ್ಯಾಹ್ನ 2 ಗಂಟೆಯ ನಂತರವಷ್ಟೇ ಆರಂಭವಾಗುವಂತಾಯಿತು.
ಕಂಪ್ಲೀಟ್ ಡಿಟೇಲ್ಸ್:
ಅ.23 ರಂದು ನಡೆದಿದ್ದ ಈ ಜಿದ್ದಾಜಿದ್ದಿನ ಚುನಾವಣೆಯಲ್ಲಿ ದಾಖಲೆಯ 73,692 ಪದವೀಧರರು ಹಕ್ಕು ಚಲಾಯಿಸಿದ್ದರು. 14 ಟೇಬಲ್ಗಳಲ್ಲಿ ಒಟ್ಟು 6 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಪ್ರಕ್ರಿಯೆ ವಿಳಂಬವಾಗಿರುವುದರಿಂದ ಅಂತಿಮ ಫಲಿತಾಂಶ ಹೊರಬರಲು ತಡರಾತ್ರಿಯಾಗುವ ಸಾಧ್ಯತೆಯಿದೆ.



