ವೆಸ್ಟ್‌ ಇಂಡಿಸ್‌ ಕ್ರಿಕೆಟ್‌ಗೆ ಬರಸಿಡಿಲು: ಹಠಾತ್ ವಿದಾಯ ಘೋಷಿಸಿದ ಮತ್ತೋರ್ವ ಸ್ಫೋಟಕ ಆಟಗಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಜುಲೈ- 18, 19 ರ ದಿನಗಳು ಕ್ರಿಕೆಟ್‌ ಜಗತ್ತಿಗೆ ಕರಾಳ ದಿನ. ವಿಶ್ವಕ್ರಿಕೆಟ್‌ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಮೂವರು ಖ್ಯಾತನಾಮ ಕ್ರಿಕೆಟಿಗರು ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಮೊದಲಿಗೆ ಇಂಗ್ಲೆಂಡ್‌ ಆಲ್ರೌಂಡರ್ ಬೆನ್‌ ಸ್ಟೋಕ್ಸ್‌ (ಏಕದಿನ) , ಆಬಳಿಕ ವಿಂಡೀಸ್‌ ಬ್ಯಾಟ್ಸ್ಮನ್ ದಿನೇಶ್‌ ರಾಮ್‌ ದಿನ್‌, ಇದೀಗ ಅದೇದೇಶದ ಸ್ಫೋಟಕ ಆಟಗಾರ ಲೆಂಡ್ಲ್ ಸಿಮನ್ಸ್ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ‌


ಸಿಮನ್ಸ್  ಮಂಗಳವಾರ ತಮ್ಮ 16 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ  ವಿದಾಯ ಹೇಳುತ್ತಿರುವುದಾಗಿ ಟ್ವಿಟರ್‌ ನಲ್ಲಿ ಪ್ರಕಟಿಸಿದ್ದಾರೆ. ಅದಾಗ್ಯೂ, ಅವರು ಫ್ರಾಂಚೈಸಿ ಕ್ರಿಕೆಟ್‌ ನಲ್ಲಿ ಮುಂದುವರಿಸುವುದಾಗಿ ಹೇಳಿದ್ದಾರೆ. ಸಿಮನ್ಸ್ 16 ವರ್ಷಗಳ ಅವಧಿಯಲ್ಲಿ 8 ಟೆಸ್ಟ್‌ಗಳು, 68 ಏಕದಿನ ಮತ್ತು 68 ಟಿ.20 ಪಂದ್ಯಗಳಲ್ಲಿ ವಿಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ ಒಟ್ಟಾರೆಯಾಗಿ 3763 ರನ್‌ಗಳನ್ನು ಕಲೆಹಾಕಿದ್ದಾರೆ. ಅವರು 2006 ರಲ್ಲಿ ಪಾಕಿಸ್ತಾನದ ವಿರುದ್ಧ ಫೈಸಲಾಬಾದ್‌ನಲ್ಲಿ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಏಕದಿನದಲ್ಲಿ ಒಟ್ಟಾರೆಯಾಗಿ, ಎರಡು ಶತಕಗಳನ್ನು ಒಳಗೊಂಡಂತೆ 1958 ರನ್‌ಗಳನ್ನು ಗಳಿಸಿದ್ದಾರೆ.

ಸಿಮನ್ಸ್ ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್ , ಟ್ರಿನ್‌ಬಾಗೊ ನೈಟ್ ರೈಡರ್ಸ್ (ಸಿಪಿಎಲ್‌ನಲ್ಲಿ), ಕರಾಚಿ ಕಿಂಗ್ಸ್ (ಪಿಎಸ್‌ಎಲ್‌ನಲ್ಲಿ) ಮತ್ತು ಸಿಲ್ಹೆಟ್ ಸನ್‌ರೈಸರ್ಸ್ (ಬಿಪಿಎಲ್‌ನಲ್ಲಿ) ತಂಡಗಳನ್ನು ಪ್ರತಿನಿಧಿಸಿದ್ದಾರೆ. 20 ಅರ್ಧಶತಕಗಳು ಸೇರಿದಂತೆ 91 ಇನ್ನಿಂಗ್ಸ್‌ಗಳಿಂದ 2629 ರನ್‌ಗಳೊಂದಿಗೆ, ಅವರು ಸಿಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ತಮ್ಮ ವೃತ್ತಿಜೀವನದುದ್ದಕ್ಕೂ ಬೆಂಬಲವಾಗಿ ನಿಂತಿದ್ದಕ್ಕಾಗಿ ಸಿಮನ್ಸ್‌ ತಮ್ಮ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
“ಡಿಸೆಂಬರ್ 7, 2006 ರಂದು ನಾನು ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಮರೂನ್ ಬಣ್ಣದ ಬಟ್ಟೆಯನ್ನು ಧರಿಸಿದಾಗ, ನನ್ನ ಅಂತರಾಷ್ಟ್ರೀಯ ವೃತ್ತಿಜೀವನವು 16 ವರ್ಷಗಳವರೆಗೆ ಇರುತ್ತದೆ ಎಂದು ಊಹಿಸಿಯೇ ಇರಲಿಲ್ಲ. ಆದರೆ ಕ್ರೀಡೆಯ ಮೇಲಿನ ನನ್ನ ಉತ್ಸಾಹ ಹಾಗೂ ಪ್ರೀತಿ ನನ್ನನ್ನು ಇಲ್ಲಿಯವರೆಗೆ ಕರೆತಂದಿತು. ಈಗ ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅವಕಾಶಗಳಿಗಾಗಿ ನಾನು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ವಿಂಡೀಸ್‌ ಕ್ರಿಕೆಟಿಗರಿಗೆ  ಶುಭ ಹಾರೈಸುತ್ತೇನೆ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!