ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಮೊಮ್ಮಗ ಸಮರ್ಥ್ ವಿಜಯ್ ನಿರಾಣಿ 3 ವರ್ಷ 10 ತಿಂಗಳಲ್ಲೇ ಗಾಲ್ಫ್ ಕಾರ್ಟ್ ಓಡಿಸಿ ದಾಖಲೆ ಬರೆದಿದ್ದಾನೆ. ಬಾಲಕನ ಪ್ರತಿಭೆ ಗಮನಿಸಿದ ಮುರುಗೇಶ್ ನಿರಾಣಿಯವರ ಮಗ ವಿಜಯ್ ಹಾಗೂ ಅವರ ಪತ್ನಿ ಸುಶ್ಮಿತಾ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ವೀಡಿಯೊ ಕಳುಹಿಸಿದ್ದರು.
ಈ ದಾಖಲೆ ಸಂಸ್ಥೆಗಳ ತೀರ್ಪುಗಾರರು ಮುಧೋಳ ನಗರಕ್ಕೆ ಬಂದು ಪರೀಕ್ಷೆ ಮಾಡಿದ್ದಾರೆ. ಬಾಲಕನ ಚಾಲನೆ ಕಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ದಾಖಲೆ ಪ್ರಶಸ್ತಿ, ಪದಕ ನೀಡಿ ಗೌರವಿಸಿದ್ದಾರೆ.
“ಸಮರ್ಥನಿಗೆ ಇದು 2ನೇ ಅವಾರ್ಡ್. ಅವನು ಮಾತನಾಡಲು ಶುರು ಮಾಡಿದಾಗಿನಿಂದ ಮನೆಯಲ್ಲಿ ಅಜ್ಜಿ ಶ್ಲೋಕ ಹೇಳಿಕೊಡುತ್ತಿದ್ದರು. ಹೀಗಾಗಿ 2 ವರ್ಷ 10 ತಿಂಗಳಿದ್ದಾಗ ಅತೀ ಹೆಚ್ಚು ಶ್ಲೋಕ ಹೇಳಿರುವುದಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಪ್ರಶಸ್ತಿ ಬಂದಿತ್ತು. ಇದೀಗ ಗಾಲ್ಫ್ ಕಾರ್ಟ್ ಓಡಿಸಿರುವುದಕ್ಕೆ ಎರಡನೇ ಅವಾರ್ಡ್ ಬಂದಿದೆ” ಎಂದು ತಾಯಿ ಸುಷ್ಮಿತಾ ಖುಷಿ ಹಂಚಿಕೊಂಡರು.
“ಸಣ್ಣವನಿದ್ದಾಗಿನಿಂದಲೂ ಬೈಕ್, ಕಾರುಗಳ ಮೇಲೆ ಅವನಿಗೆ ಬಹಳ ಆಸಕ್ತಿ ಇತ್ತು. ಮನೆಯ ಒಳಗಡೆ ಸೋಪಾ, ಟೇಬಲ್ಗಳಿಗೆ ತಾಗದಂತೆ ತಿರುವು ತೆಗೆದುಕೊಂಡು ಬಹಳ ಚೆನ್ನಾಗಿ ಆಟಿಕೆ ಕಾರು ಓಡಿಸುತ್ತಿದ್ದ. ಆತನಿಗೆ ರಾತ್ರಿ ಮಲಗುವ ಮುನ್ನ, ಬೆಳಗ್ಗೆ ಎದ್ದಾಗ ಕಾರು, ಬೈಕ್ ಬೇಕು. ಒಮ್ಮೆ ಶಾಲೆಗೆ ಹೋಗಬೇಕಾದರೆ ಚಾಲಕನ ಕಾಲ ಮೇಲೆ ಕುಳಿತುಕೊಂಡು ಅವನೇ ಕಾರು ಚಾಲನೆ ಮಾಡುತ್ತಿದ್ದ. ಹೀಗೆ ಒಂದು ದಿನ ಗಾಲ್ಫ್ ಕಾರ್ಟ್ನಲ್ಲೂ ಕುಳಿತುಕೊಂಡಾಗ ಅವನೊಬ್ಬನೇ ಡ್ರೈವ್ ಮಾಡಬೇಕೆಂಬ ಆಸೆ ಇತ್ತು. ಆಗ ಅವನಿಗೆ 3 ವರ್ಷ 10 ತಿಂಗಳಾಗಿತ್ತು” ಎಂದು ಅವರು ಹೇಳಿದರು.