ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ಹೋರಾಟ ಕರ್ನಾಟಕದಲ್ಲಿ ಹೊತ್ತಿ ಉರಿಯುತ್ತಿದೆ. ಇಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗವೂ ಬೆಂಬ ಕೊಟ್ಟಿದ್ದು, ಶಿವರಾಜ್ ಕುಮಾರ್ ನೇತೃತ್ವದಲ್ಲಿ ಫಿಲ್ಮ್ ಚೇಂಬರ್ ಎದುರು ಪ್ರತಿಬಟನೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವಣ್ಣ..ʻಕಾವೇರಿ ಹೋರಾಟ ಇಂದು ನಿನ್ನೆಯದಲ್ಲ, ಬಹಳಷ್ಟು ವರ್ಷಗಳಿಂದ ಇದು ಬಗೆಹರಿಯದ ಕಗ್ಗಂಟಾಗಿದೆ. ಇದು ಸಿನಿಮಾ ಕಲಾವಿದರಾಗಲೀ, ರೈತರಾಗಲೀ, ಮತ್ತೊಬ್ಬರಾಗಲೀ ಬಂದು ಹೋರಾಟ ಮಾಡಿದರೆ ಸರಿ ಹೋಗುವಂಥದ್ದಲ್ಲ, ಇದಕ್ಕೆ ಎರಡೂ ರಾಜ್ಯಗಳ ರಾಜಕೀಯ ನಾಯಕರು ಕುಳಿತು ಮಾತನಾಡುವುದೊಂದೇ ಪರಿಹಾರ ಎಂದರು.
ಎರಡೂ ಸರಕಾರಗಳು ಒಟ್ಟಿಗೆ ಕುಳಿತು ಮಾತುಕತೆ ನಡೆಸಿದರಷ್ಟೇ ಇದಕ್ಕೊಂದು ಪರಿಹಾರ ದೊರೆಯುತ್ತದೆ. ಅದು ಬಿಟ್ಟು ಹೀಗೆ ಬಂದ್, ಹೋರಾಟ ಮಾಡಿದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತಾ ಎಂದು ಪ್ರಶ್ನಿಸಿದರು. ಜನಸಾಮಾನ್ಯರಿಗೆ ತೊಂದರೆ ಕೊಟ್ಟು, ಬಸ್‌ಗೆ ಕಲ್ಲೆಸೆದು, ಟೈರ್ ಸುಟ್ಟು ಪ್ರತಿಭಟಿಸುವುದರಿಂದ ಸಮಸ್ಯೆ ಖಂಡಿತಾ ಪರಿಹಾರ ಆಗುವುದಿಲ್ಲ. ರಾಜಕೀಯ ನಾಯಕರ ಮಧ್ಯಪ್ರವೇಶಿಸದರೆ ಮಾತ್ರ ಎಲ್ಲವೂ ಸಾಧ್ಯ, ನಾವು ಬಂದು ಒಂದೆರೆಡು ಮಾತನಾಡಿ ಹೋಗಬಹುದಷ್ಟೇ ಅಲ್ಲಿರುವ ಸಮಸ್ಯೆ ಅಲ್ಲೇ ಇರುತ್ತದೆ ಎಂದರು.