CSK VS MI | ಸಿಎಸ್‌ಕೆ ಪ್ಲೇ ಆಫ್‌ ಕನಸು ಇನ್ನೂ ಜೀವಂತ; ಮುಂಬೈ ಮಣಿಸಲು ಧೋನಿ ರಣತಂತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನಲ್ಲಿ ಇಂದು ರೋಚಕ ಕಾದಾಟ ನಡೆಯಲಿದೆ. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (CSK vs MI) ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ.
ಈಗಾಗಲೇ ಸೋತು ಟೂರ್ನಿಯಿಂದ ಹೊರಬಿದ್ದಿರುವ ಮುಂಬೈಗೆ ಇದು ಔಪಚಾರಿಕ ಪಂದ್ಯವಾಗಿದ್ದರೆ, ಸಿಎಸ್‌ಕೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಪರಿಣಮಿಸಿದೆ.
ಧೋನಿ ಪಡೆ ಈ ಪಂದ್ಯದಲ್ಲಿ ಸೋತರೆ ಎರಡನೇ ತಂಡವಾಗಿ ಟೂರ್ನಿಯಿಂದ ನಿರ್ಗಮಿಸಲಿದೆ. ಹಾಗಾದಲ್ಲಿ ಐಪಿಎಲ್ ಇತಿಹಾಸದ ಎರಡು ಅತ್ಯುತ್ತಮ ತಂಡಗಳಾದ ಮುಂಬೈ ಮತ್ತು ಚೆನ್ನೈ ಐಪಿಎಲ್ 2022 ರಲ್ಲಿ ಮೊದಲ ಎರಡು ತಂಡಗಳಾಗಿ ಹೊರಬೀಳುವ ಕೆಟ್ಟ ದಾಖಲೆಯೊಂದು ನಿರ್ಮಾಣಗೊಳ್ಳಲಿದೆ. ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಗಾಯದ ಕಾರಣ ಐಪಿಎಲ್‌ ನಿಂದಲೇ ಹೊರಬಿದ್ದಿದ್ದಾರೆ ಎಂಬುದು ಗಮನಾರ್ಹ. ಹೀಗಾಗಿ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಮುಂಬೈ-ಚೆನ್ನೈ ಕಣಕ್ಕಿಳಿಯಲಿವೆ.
ಮುಂಬೈಗೆ ಹೋಲಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ಪ್ರದರ್ಶನ ಕೊಂಚ ಪರವಾಗಿಲ್ಲ ಎನ್ನಬಹುದು. ಸಿಎಸ್ಕೆ ಆಡಿದ 11 ರಲ್ಲಿ 4 ಗೆಲುವುಗಳನ್ನು ಪಡೆದಿದೆ. ಜಡೇಜಾ ನೇತೃತ್ವದಲ್ಲಿ ಆಡಿದ ಆರಂಭಿಕ 8 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆದ್ದು 6 ರಲ್ಲಿ ಸೋತಾಗ CSK ನ ಪ್ಲೇಆಫ್ ಆಸೆ ಬಹುತೇಕ ಕಮರಿತ್ತು. ಆದರೆ ಧೋನಿ ಹಿಂದಿರುಗಿದ ನಂತರ ಆಡಿದ 3 ಪಂದ್ಯಗಳಲ್ಲಿ 2 ಅನ್ನು ಗೆದ್ದಿರುವ CSK, ಪ್ಲೇಆಫ್‌ಗೆ ಪ್ರವೇಶಿಸುವ ಕ್ಷೀಣ ಅವಕಾಶವನ್ನು ಹೊಂದಿದೆ. ಇದಕ್ಕಾಗಿ, ಸಿಎಸ್‌ಕೆ ಉಳಿದ 3 ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ, ಇತರ ಪಂದ್ಯಗಳ ಫಲಿತಾಂಶವು ಅದಕ್ಕೆ ಪೂರಕವಾಗಿರಬೇಕು.
ಸಿಎಸ್ಕೆ ಆರಂಭಿಕರಾದ ಡ್ವೇನ್ ಕಾನ್ವೇ ಮತ್ತು ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭವನ್ನು ನೀಡುತ್ತಿದ್ದಾರೆ. ಕಾನ್ವೆ ಸತತ ಮೂರು ಅರ್ಧಶತಕಗಳ ಮೂಲಕ ತಂಡಕ್ಕೆ ಹೊಸ ಹಾದಿಯನ್ನು ಸೃಷ್ಟಿಸಿದ್ದಾರೆ. ಮೊಯಿನ್ ಅಲಿ ಕೂಡ ಫಾರ್ಮ್‌ಗೆ ಮರಳಿದ್ದಾರೆ. ಯುವ ಬೌಲರ್‌ಗಳಾದ ಮುಖೇಶ್ ಚೌಧರಿ, ಸಿಮ್ರಂಜಿತ್ ಸಿಂಗ್ ಮತ್ತು ಶ್ರೀಲಂಕಾದ ಮಹೇಶ್ ಆಕ್ರಮಣಕಾರಿ ದಾಳಿ ಸಂಘಟಿಸಿದರೆ, ಚೆನ್ನೈ ಮೇಲುಗೈ ನಿರೀಕ್ಷಿಸಬಹುದು. ಧೋನಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಕಿರನ್ ಪೊಲಾರ್ಡ್ ಅವರಂತಹ ಆಟಗಾರರ ಫಾರ್ಮ್‌ ಕೊರತೆಯಿಂದಾಗಿ ಮುಂಬೈ ತಂಡವು ಪರದಾಡುತ್ತಿದೆ. ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಕೆಕೆಆರ್ 5 ವಿಕೆಟ್‌ಗಳಿಂದ ಸೋಲಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೆ 33 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ 19 ಪಂದ್ಯಗಳನ್ನು ಗೆದ್ದಿದೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳನ್ನು ಗೆದ್ದಿದೆ. ಮುಂಬೈ ತಂಡವು ಚೆನ್ನೈ ವಿರುದ್ಧ ಒಟ್ಟಾರೆ ಮುನ್ನಡೆ ಸಾಧಿಸಿದ್ದನ್ನು ಗಮನಿಸಬಹುದಾಗಿದ್ದು ಪಂದ್ಯ ಕುತೂಹಲ ಕೆರಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!