ಬೆಂಗಳೂರಿನ ಮರಗಳ ಬಗ್ಗೆ ಮೋದಿ ಹಂಚಿಕೊಂಡ ಟ್ವಿಟರ್‌ ಥ್ರೆಡ್‌ನಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರು ʼಉದ್ಯಾನ ನಗರಿʼ ಎಂದೇ ಪ್ರಸಿದ್ಧ. ಲಾಲ್‌ಬಾಗ್‌,ಕಬ್ಬನ್‌ ಪಾರ್ಕ್‌ ನಂತಹ ಉದ್ಯಾನಗಳು ಹಾಗು ಕೆರೆಗಳಿಂದ ಸಮೃದ್ಧವಾಗಿರುವ ಬೆಂಗಳೂರು ಶಹರದಲ್ಲಿ ಮರಗಳ ಸಂಖ್ಯೆಯೂ ಹೆಚ್ಚಿದೆ. ವಸಂತ ಮಾಸದಲ್ಲಿ ಬೆಂಗಳೂರಿನ ಮರಗಳು ಹೂ ಬಿಟ್ಟು ಕಂಗೊಳಿಸುತ್ತಿರುವ ಸುಂದರ ದೃಶ್ಯಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಬೆಂಗಳೂರಿನ ಮರಗಳ ಬಗ್ಗೆ ಆಸಕ್ತಿದಾಯಕ ಥ್ರೆಡ್‌ ಒಂದನ್ನು ಹಂಚಿಕೊಂಡಿದ್ದು ಬೆಂಗಳೂರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದನ್ನು ಶ್ಲಾಘಿಸಿದ್ದಾರೆ.

ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ಮೋದಿಯವರು ನಿಸರ್ಗಪ್ರೇಮಿ ಸುಭಾಷಿಣಿ ಚಂದ್ರಮಣಿಯವರ ಟ್ವೀಟ್‌ ಥ್ರೆಡ್‌ ಹಂಚಿಕೊಂಡು “ಬೆಂಗಳೂರು ಮರಗಳು ಮತ್ತು ಸರೋವರಗಳು ಸೇರಿದಂತೆ ಪ್ರಕೃತಿಯೊಂದಿಗೆ ಬಹಳ ಆಳವಾದ ಬಾಂಧವ್ಯವನ್ನು ಹೊಂದಿದೆ. ಇದು ಬೆಂಗಳೂರು ಮತ್ತು ಅದರ ಮರಗಳ ಬಗ್ಗೆ ಆಸಕ್ತಿದಾಯಕ ವಿಷಯ ತಿಳಿಸುವ ಥ್ರೆಡ್” ಎಂದಿದ್ದಾರೆ. ಆ ಟ್ವೀಟ್‌ ನಲ್ಲಿರುವ ಆಸಕ್ತಿದಾಯಕ ಅಂಶಗಳೇನೆಂದರೆ..

  • ಬೆಂಗಳೂರಿನಲ್ಲಿ ವರ್ಷಪೂರ್ತಿ ಅರಳುವ ವೈವಿಧ್ಯಮಯ ಮರಗಳ ಸಂಗ್ರಹವಿದೆ. ಶತಮಾನಗಳ ಹಿಂದೆ ಬೆಂಗಳೂರು ನಗರವನ್ನು ಯೋಜಿಸುವಾಗ ಒಂದು ಮರವು ಅರಳುವುದನ್ನು ನಿಲ್ಲಿಸಿದಾಗ, ಇನ್ನೊಂದು ಮರವು ಅದರ ಸ್ಥಾನವನ್ನು ಪಡೆದುಕೊಳ್ಳುವ ರೀತಿಯಲ್ಲಿ ಮರಗಳನ್ನು ಆರಿಸಲಾಗಿದೆ. ಹಾಗಾಗಿ ಇಲ್ಲಿ ವರ್ಷಪೂರ್ತಿ ಒಂದಲ್ಲ ಒಂದು ಮರಗಳು ಅರಳುತ್ತವೆ. ಬೆಂಗಳೂರಿನ ಋತುಗಳು ಹೂವಿನ ಸ್ವರಮೇಳಗಳಿಂದ ಕೂಡಿರುತ್ತವೆ.
  • ಮಳೆಗಾಲದಲ್ಲಿಯೂ ಅರಳುವ ಮರಗಳು ಬೆಂಗಳೂರಿನಲ್ಲಿವೆ. ಕಾಲೋಚಿತ ಮರಗಳ ಹೊರತಾಗಿ, ವರ್ಷಪೂರ್ತಿ ಅರಳುವ ದೀರ್ಘಕಾಲಿಕ ಮರಗಳೂ ಇವೆ. ಬೆಂಗಳೂರಿನ ಗಾಳಿಯು ಯಾವಾಗಲೂ ಹೂಗಳ ಘಮಲಿನಿಂದ ತುಂಬಿರುತ್ತದೆಯಾದ್ದರಿಂದ ʼದಿ ಗಾರ್ಡನ್‌ ಸಿಟಿʼ ಎಂದು ಕರೆಸಿಕೊಳ್ಳುತ್ತದೆ.
  • ಇತ್ತೀಚೆಗೆ ಬೆಂಗಳೂರಿನ ಬೀದಿಗಳು ಗುಲಾಬಿ ಟಬೆಬುಯಾ ರೋಸಿಯಾ ಹೂವುಗಳಿಂದ ಕಂಗೊಳಿಸುತ್ತಿದ್ದು ಬೆಂಗಳೂರಿನ ಈ ʼಚೆರ್ರಿ ಬ್ಲಾಸಮ್‌ʼ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿವೆ.
  • ಇವುಗಳಲ್ಲದೇ ಬೆಂಗಳೂರಿನಲ್ಲಿ ಸುಂದರವಾದ ಹಳದಿ ಟಬೆಬುಯಾ ಅರ್ಜೆಂಟೀಯಾ ಹೂವುಗಳೂ ಅರಳುತ್ತಿದ್ದು ಬೆಂಗಳೂರಿನ ಸೌಂದರ್ಯ ಹೆಚ್ಚಿಸಿವೆ. ಇದಲ್ಲದೇ ನೇರಳೆ ಜಕರಂಡಾ ಹೂವುಗಳು ಇತರ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಗಾಢವಾದ ಬಣ್ಣಗಳಿಂದ ಕಂಗೊಳಿಸುತ್ತವೆ.
  • ಮಾವು, ಬೇವು, ಮಹಾಗನಿ, ಹೊಂಗೆ , ಅಶೋಕೆ ಮರ, ಅಂಬ್ರೆಲಾ ಅಥವಾ ಆಕ್ಟೋಪಸ್ ಮರಗಳು, ರೇಷ್ಮೆ ಹತ್ತಿಮರಗಳು ಮೊದಲ 3 ತಿಂಗಳಲ್ಲಿ ಬೆಂಗಳೂರಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ.ನಂತರದ ಎಪ್ರಿಲ್‌, ಮೇ, ಜೂನ್‌ & ಜುಲೈ ತಿಂಗಳಲ್ಲಿ ಹಳದಿ ಹೂವುಗಳು ಹಾಗು ಗುಲ್‌ಮೊಹರ್‌, ಕೆಂಜಿಗೆ/ರತ್ನಗಂಧಿ ಮರಗಳ ಕೆಂಪು ಹೂವುಗಳು ತುಂಬಿರುತ್ತವೆ.
  • ಬೇಸಿಗೆ ಕೊನೆಗೊಂಡ ನಂತರ ಸಂಪಿಗೆ ಹೂವಿನ ಸುಗಂಧ ಬೆಂಗಳೂರನ್ನಾವರಿಸಿಕೊಳ್ಳುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ, ಆಕಾಶ ಮಲ್ಲಿಗೆ ಅರಳುತ್ತದೆ. ಚಳಿಗಾಲದಲ್ಲಿ ಬಾದಾಮಿ ಮರಗದ ಎಲೆಗಳು ಕೆಂಪು ಗುಲಾಬಿ ಬಣ್ಣಕ್ಕೆ ತಿರುಗಿ ಶೀತ ಋತುವಿಗೆ ಮೆರುಗು ನೀಡುತ್ತವೆ. ನಾಗಲಿಂಗ ಪುಷ್ಪ, ನೈಲ್ ಟುಲಿಪ್ ಹೂ, ಪೋರ್ಟಿಯಾ ಮರ ಮತ್ತು ಕಿತ್ತಳೆ ಗೀಗರ್ ಹೂವುಗಳು ಬಹುವಾರ್ಷಿಕವಾಗಿ ಕಂಗೊಳಿಸುತ್ತವೆ. ಮುಂದಿನ ವರ್ಷವೂ ಮತ್ತೆ ಈ ಆವರ್ತನೆ ನಡೆಯುತ್ತದೆ.
  • ಈ ಆಕರ್ಷಣೆಯ ಹಿಂದೆ ತೋಟಗಾರಿಕಾ ತಜ್ಞರಾದ ಕ್ಯಾಮರೂನ್, ಕೃಂಬಿಗೆಲ್, ಜವರಯ್ಯ ಮತ್ತು ಮರಿ ಗೌಡ ಅವರ ಶ್ರಮವಿದೆ.

ಈ ಮಾಹಿತಿಗಳನ್ನು ನೀಡುವ ಟ್ವೀಟ್‌ ಥ್ರೆಡ್‌ ಒಂದನ್ನು ಹಂಚಿಕೊಂಡ ಮೋದಿ ಮುಂದುವರೆದು “ನೀವೂ ನಿಮ್ಮ ನಗರಗಳ ಕುರಿತಾಗಿ ಇಂತಹ ಆಸಕ್ತಿದಾಯಕ ಮಾಹಿತಿ ಹಂಚಿಕೊಳ್ಳಿ. ಇತರರು ಅದನ್ನು ಓದುವಂತಾಗಲಿ” ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!