ಏನಿದು ಜಗತ್ತನ್ನೇ ನಡುಗಿಸುತ್ತಿರುವ ಮಂಕೀ ಪಾಕ್ಸ್? ಲಕ್ಷಣ ಏನು? ರಕ್ಷಣೆ ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮಂಕಿಪಾಕ್ಸ್ ತನ್ನ ಕಬಂಧ ಬಾಹು ಚಾಚುವ ಸೂಚನೆ ನೀಡಿದ್ದು, ಇದೇ ವೇಳೆ ಈ ಮಹಾಮಾರಿ ತಡೆಗೆ ಸರ್ಕಾರ ಸಮರೋಪಾದಿಯ ಕಾರ್ಯ ಕೈಗೆತ್ತಿಕೊಂಡಿದೆ. ಈ ಸೋಂಕಿಗೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯನ್ನೂ ಮಾಡಿದೆ. ಹಾಗಾದರೆ ಏನಿದು ಇಷ್ಟು ಅಪಾಯಕಾರಿಯಾದ ಸೋಂಕು? ಇಲ್ಲಿದೆ ಮಾಹಿತಿ ಓದಿ…
ಹೇಗೆ ಹರಡುತ್ತದೆ ಈ ಸೋಂಕು?

ಮಾನವ ಸಂಪರ್ಕದ ಮೂಲಕ ಮತ್ತು ಪ್ರಾಣಿ – ವ್ಯಕ್ತಿಗಳ ಸಂಪರ್ಕದಿಂದ ಹರಡಬಹುದು. ಮಾನವರ ವಿಷಯದಲ್ಲಿ, ಇನ್ನೊಬ್ಬ ಸೋಂಕಿತ ವ್ಯಕ್ತಿಯೊಂದಿಗೆ ಮುಖಾಮುಖಿಯಾಗುವುದು, ಚರ್ಮದಿಂದ ಚರ್ಮ ಸಂಪರ್ಕ, ಬಾಯಿಯಿಂದ ಬಾಯಿ ಅಥವಾ ಬಾಯಿಯಿಂದ ಚರ್ಮ ಸಂಪರ್ಕದಿಂದ ಇದು ಹರಡಬಹುದು. ದಂಶಕಗಳು ಮತ್ತು ಸಸ್ತನಿಗಳಿಂದ ಮಂಕಿಪಾಕ್ಸ್ ಸೋಂಕು ಹರಡಬಹುದು. ಅಲ್ಲದೆ ಸೋಂಕು ತಗುಲಿ ಸತ್ತ ಪ್ರಾಣಿಯಿಂದಲೂ ಈ ಸೋಂಕು ಕಾಣಿಸಿಕೊಳ್ಳಬಹುದು. ಲೈಂಗಿಕ ಸಂಪರ್ಕ ಸೇರಿದಂತೆ ಮಂಕಿಪಾಕ್ಸ್‌ನಿಂದ ಬಳಲುತ್ತಿರುವ ಯಾರೊಂದಿಗಾದರೂ ನಿಕಟ ಸಂಪರ್ಕದಲ್ಲಿರುವ ಜನರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ರೋಗಕ್ಕೆ ತುತ್ತಾದ ಪ್ರಾಣಿಗಳ ಸಂಪರ್ಕಕ್ಕೆ ಬಂದರೆ ಸೋಂಕು ಹರಡಬಹುದು.

ಮಂಕಿಪಾಕ್ಸ್ ರೋಗ ಲಕ್ಷಣಗಳೇನು?

ಮಂಕಿಪಾಕ್ಸ್‌ನ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ತಲೆನೋವು, ಜ್ವರ, ಕಡಿಮೆ ಶಕ್ತಿ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಎಐಐಎಂಎಸ್‌ನ ವೈದ್ಯಕೀಯ ವಿಭಾಗದ ಡಾ.ಪಿಯೂಷ್ ರಂಜನ್ ಅವರ ಪ್ರಕಾರ, ಮಂಕಿಪಾಕ್ಸ್ ಲಕ್ಷಣಗಳು ಸಿಡುಬು ಮತ್ತು ಚಿಕನ್‌ಪಾಕ್ಸ್‌ನಂತಿವೆ. ರೋಗಿಗಳಿಗೆ ಜ್ವರ ಮತ್ತು ದುಗ್ಧರಸ ಗ್ರಂಥಿಗಳ ಹಿಗ್ಗುವಿಕೆ ಕಾಣಿಸಿಕೊಳ್ಳುತ್ತದೆ. 1-5 ದಿನಗಳ ನಂತರ ರೋಗಿಯು ಮುಖ, ಅಂಗೈಗಳಲ್ಲಿ ದದ್ದುಗಳು ಕಾಣಿಸಬಹುದು. ಅಲ್ಲದೇ ಕಾರ್ನಿಯಾದಲ್ಲಿ ದದ್ದುಗಳಾಗಿ ಇದು ಕುರುಡುತನಕ್ಕೆ ಕಾರಣವಾಗಬಹುದು. ಗಾಯಗಳಿಗೆ ಕಾರಣವಾಗುವ ದದ್ದುಗಳ ಸಂಖ್ಯೆಯು ಒಂದರಿಂದ ಹಲವಾರು ಸಾವಿರದವರೆಗೆ ಇರುತ್ತದೆ.

ಅಪಾಯ ತಡೆಗಟ್ಟಲು ಏನು ಮಾಡಬೇಕು?

ಮಂಕಿಪಾಕ್ಸ್ ಹೊಂದಿರುವ ಶಂಕಿತ ಅಥವಾ ದೃಢಪಟ್ಟಿರುವ ಜನರೊಂದಿಗೆ ನಿಕಟವಾಗಿ ಬೆರೆಯದಿರುವುದು ಹಾಗೂ ಸೋಂಕಿತ ಪ್ರಾಣಿಗಳೊಂದಿಗೆ ಸಂಪರ್ಕಕ್ಕೆ ಬಾರದಿರುವುದು. ಕಲುಷಿತ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವುದು ಹಾಗೂ ಸೋಂಕುರಹಿತಗೊಳಿಸುವುದು.

ಯಾವುದೇ ರೋಗಲಕ್ಷಣಗಳು ಅಥವಾ ದದ್ದುಗಳು ಕಾಣಿಸಿದ ನಂತರ ತಕ್ಷಣ ವೈದ್ಯರನ್ನು ಕಾಣುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!