ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧುನಿಕ ಭಾರತದ ಆರ್ಥಿಕತೆಯ ವಾಸ್ತುಶಿಲ್ಪಿ ಎಂದೇ ಪರಿಗಣಿಸಲ್ಪಟ್ಟ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಸಾಮಾನ್ಯವಾಗಿ ನೀಲಿ ಪೇಟವನ್ನು ಧರಿಸಿ ಕಾಣಿಕೊಳ್ಳುತ್ತಿದ್ದರು.
ನೀಲಿ ಬಣ್ಣದ ಪೇಟವನ್ನೇ ಏಕೆ ಧರಿಸುತ್ತಾರೆ ಎಂಬ ಬಗ್ಗೆ ಆಗ್ಗಾಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದ್ದರು. ನೀಲಿ ಪೇಟವು ತಾವು ವ್ಯಾಸಂಗ ಮಾಡಿದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅವರ ಅಲ್ಮಾ ಮೇಟರ್‌ಗೆ ಗೌರವ ಸೂಚಕ ಎಂದಿದ್ದರು.
2006ರಲ್ಲಿ ಡಾಕ್ಟರೇಟ್ ಆಫ್ ಲಾ ಗೌರವಕ್ಕೆ ಪಾತ್ರರಾದ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ ಸಿಂಗ್, ತಿಳಿ ನೀಲಿ ಬಣ್ಣವು ಅವರ ನೆಚ್ಚಿನ ಬಣ್ಣಗಳಲ್ಲಿ ಒಂದಾಗಿದೆ ಮತ್ತು ಕೇಂಬ್ರಿಡ್ಜ್‌ನಲ್ಲಿನ ಅವರ ಸ್ಮರಣೀಯ ದಿನಗಳನ್ನು ಅದು ನೆನಪಿಸುತ್ತದೆ ಎಂದು ವಿವರಿಸಿದ್ದರು.
ಹೆಚ್ಚಿನ ಜನರು ನೆರೆದಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಿನ್ಸ್ ಫಿಲಿಪ್ ಅವರು ಸಿಂಗ್ ಅವರ ವಿಶಿಷ್ಟವಾದ ನೀಲಿ ಪೇಟದ ಬಗ್ಗೆ ಮಾತನಾಡಿದ್ದರು. ‘ಅವರ ಪೇಟದ ಬಣ್ಣವನ್ನು ನೋಡಿ’ ಡ್ಯೂಕ್ ಹೇಳಿದರು. ಇದು ಪ್ರೇಕ್ಷಕರ ಚಪ್ಪಾಳೆಗೆ ಕಾರಣವಾಯಿತು. ಆಕ್ಷಣ ಉತ್ತರಿಸಿದ ಸಿಂಗ್, ಅದೇ ಬಣ್ಣ ಏಕೆ ಮತ್ತು ತನಗೂ ಆ ಬಣ್ಣಕ್ಕೂ ಇರುವ ಸಂಬಂಧ ಎಂತದ್ದು ಎಂಬುದನ್ನು ವಿವರಿಸಿದ್ದರು.
‘ತಿಳಿ ನೀಲಿ ಬಣ್ಣವು ನನ್ನ ಮೆಚ್ಚಿನವುಗಳಲ್ಲಿ ಒಂದಾಗಿದೆ ಮತ್ತು ಹೀಗಾಗಿ ಅದು ಪೇಟವಾಗಿ ನನ್ನ ತಲೆಯ ಮೇಲೆ ಹೆಚ್ಚಾಗಿ ಕಂಡುಬರುತ್ತದೆ’ ಎಂದು ಸಿಂಗ್ ನಗುತ್ತಾ ಹೇಳಿದರು. ಅವರ ಟ್ರೇಡ್‌ಮಾರ್ಕ್ ಆಗಿರುವ ಬಣ್ಣದ ಬಗೆಗೆ ಅವರ ಒಲವನ್ನು ಉಲ್ಲೇಖಿಸಿದರು. ಕೇಂಬ್ರಿಡ್ಜ್‌ನಲ್ಲಿದ್ದಾಗ ಅವರ ಗೆಳೆಯರು ಪ್ರೀತಿಯಿಂದ ಅವರಿಗೆ ‘ಬ್ಲೂ ಟರ್ಬನ್’ ಎಂದು ಅಡ್ಡಹೆಸರು ನೀಡಿದ್ದರು ಎಂಬುದನ್ನು ನೆನಪಿಸಿಕೊಂಡರು.
ತನ್ನಲ್ಲಿ ಮುಕ್ತ ಮನಸ್ಸು, ನಿರ್ಭಯತೆ ಮತ್ತು ಬೌದ್ಧಿಕ ಕುತೂಹಲದ ಮೌಲ್ಯಗಳನ್ನು ಹುಟ್ಟುಹಾಕಿದ ಕೀರ್ತಿ ಕೇಂಬ್ರಿಡ್ಜ್‌ನಲ್ಲಿನ ತನ್ನ ಶಿಕ್ಷಕರು ಮತ್ತು ಗೆಳೆಯರಿಗೆ ಸಲ್ಲುತ್ತದೆ. ತಾವು ಕೇಂಬ್ರಿಡ್ಜ್‌ನಲ್ಲಿದ್ದ ಸಮಯದಲ್ಲಿ ತಮ್ಮೊಂದಿಗೆ ಇದ್ದ ನಿಕೋಲಸ್ ಕಾಲ್ದೋರ್, ಜೋನ್ ರಾಬಿನ್ಸನ್ ಮತ್ತು ಅಮರ್ತ್ಯ ಸೇನ್ ಅವರಂತಹ ಗಮನಾರ್ಹ ಅರ್ಥಶಾಸ್ತ್ರಜ್ಞರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದರು.
ಸಿಂಗ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಪ್ರೇಕ್ಷಕರು ಚಪ್ಪಾಳೆ ತಟ್ಟಿದರು ಮತ್ತು ಅವರು ತಮ್ಮ ಪ್ರೀತಿಯ ವಿಶ್ವವಿದ್ಯಾನಿಲಯದಿಂದ ಮನ್ನಣೆಯನ್ನು ಅಂಗೀಕರಿಸಿದರು.