ಏನಿದು ಸಿಸೋಡಿಯಾ ಸಿಲುಕಿಕೊಂಡಿರೋ ದೆಹಲಿ ಸಾರಾಯಿ ಹಗರಣ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ತನಿಖಾದಳವು ದೆಹಲಿಯ ಉಪಮುಖ್ಯಮಂತ್ರಿ ಮನಿಶ್‌ ಸಿಸೋಡಿಯಾ ಅವರ ನಿವಾಸ ಸೇರಿದಂತೆ ಒಟ್ಟೂ 31 ಕಡೆಗಳಲ್ಲಿ ತನಿಖೆ ನಡೆಸಿದ್ದು ಎಫ್‌ಐಆರ್‌ನಲ್ಲಿ ಸಿಸೋಡಿಯಾ ಅವರನ್ನು ಪ್ರಥಮ ಆರೋಪಿಯನ್ನಾಗಿಸಲಾಗಿದೆ. ಸತತ 15 ಗಂಟೆಗಳ ಶೋಧದನಂತರ ಹಲವಾರು ದಾಖಲೆಗಳು, ಡೇಟಾ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ತನಿಖಾದಳವು ವಶಪಡಿಸಿಕೊಂಡಿದೆ. ಪ್ರಸ್ತುತ ಚರ್ಚೆಯಲ್ಲಿರೋ ಈ ಅಬಕಾರಿ ಹಗರಣದ ಕುರಿತಾಗಿ ಕೆಲ ಆಸಕ್ತಿಕರ ಅಂಶಗಳು ಇಲ್ಲಿವೆ.

  • ಕಳೆದ ವರ್ಷ ನವೆಂಬರ್‌ ನಲ್ಲಿ ದೆಹಲಿಯ ನೂತನ ಅಬಕಾರಿ ನೀತಿಯನ್ನು ಜಾರಿ ಮಾಡಲಾಗಿತ್ತು. ಈ ನೀತಿಯ ರಚನೆ ಹಾಗೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
  • ಅಬಕಾರಿ ನೀತಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಅನುಮೋದನೆಯಿಲ್ಲದೆ ತೆಗೆದುಕೊಳ್ಳಲಾಗಿದೆ ಮತ್ತು ಟೆಂಡರ್‌ ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳನ್ನು ಮಾಡಿಕೊಡಲು ಕಾರ್ಯವಿಧಾನದಲ್ಲಿ ಲೋಪವೆಸಲಾಗಿದೆ ಎಂದು ಸಿಬಿಐ ತನ್ನ ಎಫ್‌ಐಆರ್ ನಲ್ಲಿ ಹೇಳಿದೆ. ಇದಕ್ಕಾಗಿ ಸಿಸೋಡಿಯಾ ಅವರಿಗೆ ಎರಡುಕೋಟಿ ರೂ.ಗಳಷ್ಟು ಹಣವನ್ನು ಪಾವತಿ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೇ ಮದ್ಯದ ಪರವಾನಗಿದಾರರಿಂದ ಸಂಗ್ರಹಿಸಿದ ಹಣವನ್ನು ಸಿಸೋಡಿಯಾ ಅವರ ಆಪ್ತ ಸಹಚರರು ಬೇರೆಡೆಗೆ ತಿರುಗಿಸಿದ್ದಾರೆ ಎನ್ನಲಾಗಿದೆ.
  • ಈ ವಿಚಾರದಲ್ಲಿ ಹಲವು ಕಾಯಿದೆಗಳನ್ನು ಉಲ್ಲಂಘನೆ ಮಾಡಲಾಗಿದ್ದು 1991ರ ದೆಹಲಿ ಸರ್ಕಾರದ ಕಾಯಿದೆ, 1993ರ ವ್ಯವಹಾರ ನಿಯಮಗಳ ವಹಿವಾಟು (ToBR) ಕಾಯಿದೆ, ದೆಹಲಿ ಅಬಕಾರಿ ಕಾಯ್ದೆ-2009 ಮತ್ತು 2010ರ ದೆಹಲಿ ಅಬಕಾರಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನಲಾಗಿದೆ.
  • ಅಲ್ಲದೇ ಅಬಕಾರಿ ಖಾತೆಯನ್ನು ನಿರ್ವಹಿಸುತ್ತಿದ್ದ ಸಿಸೋಡಿಯಾ ಅವರು ಲೆಫ್ಟಿನೆಂಟ್‌ ಗವರ್ನರ್‌ ರವರ ಅನುಮತಿಯಿಲ್ಲದೇ ಅಬಕಾರಿ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ ಎನ್ನಲಾಗಿದೆ.ಉದಾಹರಣೆಗೆ COVID-19 ಸಾಂಕ್ರಾಮಿಕದ ಕಾರಣದಿಂದಾಗಿ ಟೆಂಡರ್ ಮಾಡಿದ ಪರವಾನಗಿ ಶುಲ್ಕದ ಮೇಲೆ 144.36 ಕೋಟಿ ರೂ.ಗಳಿಗೆ ವಿನಾಯಿತಿ ಘೋಷಣೆ. ಹೀಗೆ ಹಲವು ಲೋಪಗಳು ನಡೆದಿದೆ ಎನ್ನಲಾಗಿದೆ.
  • ವಿದೇಶಿ ಮದ್ಯದ ದರಗಳನ್ನು ಪರಿಷ್ಕರಿಸುವ ಮೂಲಕ ಮತ್ತು ಪ್ರತಿ ಬಿಯರ್‌ನ ಆಮದು ಪಾಸ್ ಶುಲ್ಕವನ್ನು ₹ 50 ರಷ್ಟು ತೆಗೆದುಹಾಕುವ ಮೂಲಕ ಸಿಸೋಡಿಯಾ ಅವರು ಮದ್ಯದ ಪರವಾನಗಿಗಳಿಗೆ ಅನಗತ್ಯ ಪ್ರಯೋಜನಗಳನ್ನು ನೀಡಿದ್ದಾರೆ ಎಂದು ಮೂಲಗಳ ವರದಿ ಹೇಳುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಗಣನೀಯ ನಷ್ಟವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಲೆಫ್ಟಿನೆಂಟ್-ಗವರ್ನರ್ ವಿಕೆ ಸಕ್ಸೇನಾ ಅವರು ಆಪ್ ಸರ್ಕಾರದ 2021-2022‌ ರ ಅಬಕಾರಿ ನೀತಿಯ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!