ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ.
ಕಳೆದ ವರ್ಷ ಜೂನ್ 5ರಂದು ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಅವರು ಇಂದು ಮುಂಜಾನೆ ಭಾರತೀಯ ಕಾಲಮಾನ 3:27ಕ್ಕೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಗೆ ಮರಳಿದರು. ಎಂಟು ದಿನಗಳ ಕಾರ್ಯಾಚರಣೆಯು ಒಂಬತ್ತು ತಿಂಗಳಿಗೆ ಮಾರ್ಪಟ್ಟ ನಂತರ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಜರ್ನಿ ರೋಚಕವಾಗಿತ್ತು.
ಅಮೇರಿಕಾದ ಫ್ಲೋರಿಡಾ ಕರಾವಳಿಯ ಸಾಗರದಲ್ಲಿ ಸ್ಪ್ಲಾಶ್ ಡೌನ್ ಆಗುವ ಮೊದಲು ಬಾಹ್ಯಾಕಾಶ ಕ್ಯಾಪ್ಸುಲ್ ತನ್ನ ಪ್ಯಾರಾಚೂಟ್ ಅನ್ನು ನಿಯೋಜಿಸಿತ್ತು. ಇಬ್ಬರು ಗಗನಯಾತ್ರಿಗಳು ನಾಸಾದ ನಿಕ್ ಹೇಗ್ ಮತ್ತು ರೋಸ್ಕೋಸ್ಮೋಸ್ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರೊಂದಿಗೆ ಸುಮಾರು 17 ಗಂಟೆಗಳ ಕಾಲ ಪ್ರಯಾಣಿಸಿದರು.
ಈ ಕ್ರೂ-9 ಗಗನಯಾತ್ರಿಗಳ ಕೊಡುಗೆಗಳು ವೈಜ್ಞಾನಿಕ ಸಂಶೋಧನೆ ಮತ್ತು ಬಾಹ್ಯಾಕಾಶ ಪರಿಶೋಧನೆಯನ್ನು ಮುಂದುವರೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ನಾಸಾದ ಬಾಹ್ಯಾಕಾಶ ಕಾರ್ಯಾಚರಣೆ ಮಿಷನ್ ನಿರ್ದೇಶನಾಲಯದ ಉಪ ಸಹಾಯಕ ಆಡಳಿತಾಧಿಕಾರಿ ಜೋಯಲ್ ಮೊಂಟಲ್ಬಾನೊ ಹೇಳಿದ್ದಾರೆ. ನಾಸಾ ಗಗನಯಾತ್ರಿಗಳು ಮಾಡಿದ ಈ ಮಹತ್ತರ ಕೆಲಸವು ಬಾಹ್ಯಾಕಾಶ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡಲಿದೆ. ದಶಕದ ಅಂತ್ಯದ ವೇಳೆಗೆ ಮಂಗಳ ಗ್ರಹದಲ್ಲಿ ಮನುಷ್ಯನನ್ನು ಇಳಿಸುವ ಗುರಿಯನ್ನು ನಾಸಾ ಸಾಧಿಸುವ ಸಾಧ್ಯತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ.
ತಮ್ಮ ಸುದೀರ್ಘ ಪಯಣದಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಶೂನ್ಯ ಗುರುತ್ವಾಕರ್ಷಣೆಯನ್ನು ಅನುಭವಿಸಿದರು. ಸುಮಾರು 9 ತಿಂಗಳ ಸೂಕ್ಷ್ಮ ಗುರುತ್ವಾಕರ್ಷಣೆಯ ನಂತರ ಅವರ ದೇಹವು ಸಮತೋಲನ ಕಳೆದುಕೊಂಡಿದೆ. ಭೂಮಿಗೆ ಬಂದ ನಂತರವೂ ಸ್ನಾಯು ಕ್ಷೀಣತೆಯಿಂದಾಗಿ ಅವರು ತಕ್ಷಣ ನಿಲ್ಲಲು ಸಾಧ್ಯವಾಗುವುದಿಲ್ಲ ಎಂದು ವರದಿಯಾಗಿದೆ.
ದ್ರವಗಳು ಮತ್ತು ರಕ್ತದ ಹರಿವು ಬಾಹ್ಯಾಕಾಶದಲ್ಲಿ ದೇಹದ ಮೇಲ್ಭಾಗದ ಕಡೆಗೆ ಇರುತ್ತದೆ. ಗಗನಯಾತ್ರಿಗಳು ಎದ್ದು ನಿಂತಾಗ ರಕ್ತದೊತ್ತಡದಲ್ಲಿ ತೀವ್ರ ಕುಸಿತವನ್ನು ಅನುಭವಿಸಬಹುದು. ಇದು ಅವರು ಭೂಮಿಗೆ ಹಿಂತಿರುಗಿದಾಗ ತಲೆತಿರುಗುವಿಕೆ ಅಥವಾ ಮೂರ್ಛೆ ಹೋಗುವುದು ಸೇರಿ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ, ಭೂಮಿಯ ಗುರುತ್ವಾಕರ್ಷಣೆಯ ಉಪಸ್ಥಿತಿಯಲ್ಲಿ ರಕ್ತದ ಹರಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ದೇಹ ಮರಳಿ ಪಡೆಯಲು ಬಹಳ ಸಮಯ ಬೇಕಾಗುತ್ತದೆ. ಆದರೆ ಗಗನಯಾತ್ರಿಗಳು ಕ್ಷೇಮವಾಗಿ ಭೂಸ್ಪರ್ಶ ಮಾಡಿದ್ದಾರೆ.