ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ ಇಟ್ಟ ಬೇಡಿಕೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಷ್ಟ್ರ ರಾಜಧಾನಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ  ಅವರನ್ನು ಭೇಟಿ ಮಾಡಿದ್ದಾರೆ.

ಕಳೆದ 4 ತಿಂಗಳ ಅಂತರದಲ್ಲಿ ಇದು ಅವರ 2ನೇ ಭೇಟಿಯಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆ , ನರ್ಬಾಡ್ ಅಡಿ ಅನುದಾನ ಕಡಿತ, ರಾಜ್ಯದ ತೆರಿಗೆ ಪಾಲು ಹೆಚ್ಚಳ ಸೇರಿದಂತೆ ಹಲವು ಮಹತ್ವದ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ಮುಗಿದ ಬಳಿಕ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

ಪ್ರಧಾನಿಗಳನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ನಬಾಡ್‌ ಸಾಲದ ಪ್ರಮಾಣದಲ್ಲಿ 58% ಕಡಿತಗೊಳಿಸಿದ್ದು, ಪೂರ್ಣ ಪ್ರಮಾಣದ ಸಾಲ ನೀಡಬೇಕು. ನಬಾರ್ಡ್ ನಿಂದ 2023-24ರಲ್ಲಿ 5,600 ಕೋಟಿ ರೂ. ಕೃಷಿ ಸಾಲ ನೀಡಿತ್ತು. ಆದ್ರೆ 2024-25ರಲ್ಲಿ 2,340 ಕೋಟಿ ರೂ. ಕೃಷಿ ಸಾಲ ಮಾತ್ರ ನೀಡಿದೆ ಎಂದು ಗಮನಕ್ಕೆ ತಂದರಲ್ಲದೇ ಜೊತೆಗೆ ಕಳಸಾ ಬಂಡೂರಿ ಯೋಜನೆ, ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್‌ಗೆ ಮನವಿ ಮಾಡಿದ್ದಾರೆ.

ನಬಾರ್ಡ್‌ನಿಂದ ಕರ್ನಾಟಕಕ್ಕೆ ಅಲ್ಪಾವಧಿಯ ಕೃಷಿ ಸಾಲ ಮಿತಿಯನ್ನು ತೀವ್ರವಾಗಿ ಕಡಿತಗೊಳಿಸಿರುವುದು ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿಸಿದೆ. 2023-24ರಲ್ಲಿ ಮಂಜೂರಾದ 5,600 ಕೋಟಿ ರೂ. ಮಿತಿಯಂತೆ, ನಬಾರ್ಡ್ ಪ್ರಸಕ್ತ ವರ್ಷಕ್ಕೆ (2024-25) 2,340 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿದೆ. ಇದರಿಂದ 58% ಅನುದಾನ ಕಡಿತವಾಗಿದ್ದು, ರೈತರ ಹಣಕಾಸು ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚುವರಿ ಬಡ್ಡಿ ರಿಯಾಯಿತಿ ಒದಗಿಸಲು ಮುಂದಾಗದಿದ್ದರೆ ನಮ್ಮ ಹಣಕಾಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದ್ದೇನೆ. ಕರ್ನಾಟಕದ ರೈತರು ಕೃಷಿ ಸಾಲ ಪಡೆಯುವುದಕ್ಕಾಗಿ ಈ ಸಮಸ್ಯೆ ಸರಿಪಡಿಸಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶಿಸಬೇಕೆಂದು ವಿನಂತಿಸುತ್ತೇನೆ ಎಂದೂ ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!