ವೀಕೆಂಡ್ ಕರ್ಫ್ಯೂ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನು ಇರುತ್ತೆ, ಇರಲ್ಲ?…ಇಲ್ಲಿದೆ ಮಾಹಿತಿ

ಹೊಸದಿಗಂತ ವರದಿ,ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಾರದಲ್ಲಿ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಸರಕಾರದ ಮಾನದಂಡಗಳ ಮಿತಿಯಲ್ಲಿ ನಡೆಸಲು ಅವಕಾಶ ನೀಡಲಾಗುವುದು. ಹೊರಾಂಗಣದಲ್ಲಿ 200 ಜನ ಒಳಾಂಗಣದಲ್ಲಿ 100 ಮಂದಿಯ ಮಿತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಆಕ್ಷೇಪಗಳು ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಶೇ.0.50ರಷ್ಟಿದ್ದ ಪಾಸಿಟಿವಿಟಿ ದರ ಮಂಗಳವಾರ ಶೇ.1.13ಕ್ಕೆ ಏರಿಕೆಯಾಗಿದೆ. ಜನತೆ ಅನಗತ್ಯವಾಗಿ ಓಡಾಡುವುದು, ಜನ ಸಂದಣಿಯಲ್ಲಿ ಬೆರೆಯುವುದನ್ನು ಕಡಿಮೆ ಮಾಡಬೇಕು. ಕೋವಿಡ್ ಶಿಷ್ಟಾಚಾರವನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ನುಡಿದರು.
ವೀಕೆಂಡ್ ಕರ್ಫ್ಯೂನಲ್ಲಿ ದಿನಸಿ ಸಾಮಗ್ರಿ, ರಸ್ತೆ ಬದಿ ವ್ಯಾಪಾರ, ಅಗತ್ಯ ಸೇವೆಗಳು ಇರಲಿವೆ. ವಿಕೇಂಡ್‌ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಪೂರ್ವ ನಿಗದಿತ ಪರೀಕ್ಷೆಗಳು ನಡೆಯಲಿವೆ. ಅಂತಹ ಅಭ್ಯರ್ಥಿಗಳ ಸಂಚಾರಕ್ಕೆ ಅನುಕೂಲ ಆಗುವಂತೆ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಬಸ್ಸು ಮಾಲಕರ ಸಂಘ, ವರ್ತಕರ ಸಂಘ, ಮಾಲ್‌ಗಳು ಮತ್ತು ಸಂಘ ಸಂಸ್ಥೆಗಳ ಸಭೆ ಕರೆದು ಕೋವಿಡ್ ನಿಯಂತ್ರಣದಲ್ಲಿ ಸಮುದಾಯ ಸಹಕಾರ ಪಡೆಯಲಾಗುವುದು ಎಂಒದು ಜಿಲ್ಲಾಧಿಕಾರಿ ಹೇಳಿದರು.
ಜಾತ್ರೆ, ಉರೂಸು, ಧರ್ಮನೇಮ, ಚರ್ಚ್‌ಗಳ ಉತ್ಸವಗಳನ್ನು ಮುಂದೂಡಲು ವಿನಂತಿಸಲಾಗುವುದು. ಮುಂದೂಡುವುದು ಅಸಾಧ್ಯವಾದರೆ ಸರಕಾರ ನಿಗದಿ ಪಡಿಸಿರುವ ನಿಯಮಗಳ ಮಿತಿಯಲ್ಲಿ ಅವುಗಳನ್ನು ನಡೆಸಲು ಸಮ್ಮತಿಸಲಾಗುವುದು.
ವೀಕೇಂಡ್ ಕರ್ಫ್ಯೂನಲ್ಲಿ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ
ಮುಂದಿನ ವಾರದ ವೀಕೇಂಡ್ ಕರ್ಫ್ಯೂನಲ್ಲಿ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳನ್ನು ನಡೆಸಕೂಡದು ಮತ್ತು ಅಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು.
ತಪಾಸಣಾ ಠಾಣೆಗಳಲ್ಲಿ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ಜ.5ರಿಂದ ಜ.19ರ ತನಕ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಅದರಂತೆ ಎಲ್ಲಾ ದಿನಗಳಲ್ಲಿ ರಾತ್ರೆ 10 ಗಂಟೆಯಿಂದ ಮುಂಜಾನೆ ೫ ಗಂಟೆಯ ತನಕ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯ ತನಕ ವಾರಾಂತ್ಯ ಕರ್ಫ್ಯೂ ಇರುತ್ತದೆ.
ಕೋವಿಡ್ ಶಿಷ್ಟಾಚಾರದೊಂದಿಗೆ ಎರಡು ಡೋಸ್ ಲಸಿಕೆ ಪಡೆದವರು ಪಬ್, ಕ್ಲಬ್, ಹೋಟೇಲು, ರೆಸ್ಟೋರೆಂಟ್, ಬಾರ್‌ಗಳಲ್ಲಿ ಶೇ.೫೦ರಷ್ಟು ಆಸನಗಳ ಮಿತಿಗೊಳಪಟ್ಟು ಆಹಾರ ಸೇರಿಸಲು ಅವಕಾಶ ಇದೆ. ವಾರಾಂತ್ಯ ಕರ್ಫ್ಯೂನಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲೆಯ ಶ್ರದ್ಧಾ ಕೇಂದ್ರಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರಲಿದೆ. ಆದರೆ ಸೇವೆಗಳು ಇರುವುದಿಲ್ಲ. ಎಲ್ಲಾ ಸ್ಥಳಗಳಲ್ಲಿ ಕೋವಿಡ್ ಶಿಷ್ಟಾಚಾರವನ್ನು ಪಾಲಿಸುವುದು ಕಡ್ಡಾಯವಾಗಿದೆ.
ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ಇರುವ ಕೋವಿಡ್ ಕಾರ್ಯಪಡೆಗಳನ್ನು ಮತ್ತೆ ಸಕ್ರಿಯಗೊಳಿಸಲಾಗುವುದು. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಕೋವಿಡ್ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್, ತಜ್ಞರ ತಂಡದ ಡಾ.ಶಾಂತರಾಮ ಬಾಳಿಗ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!