ಜನರು ಖುಷಿ ಇರುವಾಗ, ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಬೊಮ್ಮಾಯಿ ವಾಗ್ದಾಳಿ

ಹೊಸದಿಗಂತ ವರದಿ, ಕಲಬುರಗಿ.:

ಶೋಷಿತ ಸಮುದಾಯಗಳಿಗೆ ನ್ಯಾಯ ಬದ್ದ ಮೀಸಲಾತಿ ಕಲ್ಪಿಸಿರುವ ರಾಜ್ಯ ಬಿಜೆಪಿ‌ ಸರ್ಕಾರದ ಮೀಸಲಾತಿಗೆ ಕಾಂಗ್ರೆಸ್ ವಿರೋಧವಿದ್ದು, ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೀಳುವ ಒಂದೊಂದು ಮತವೂ ಒಳ ಮೀಸಲಾತಿ ರದ್ದುಗೊಳ್ಳಲು ಸಹಾಯ ಮಾಡಿದಂತಾಗಿರುವುದರಿಂದ ಯೋಚಿಸಿ ಮತ ಹಾಕಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನತೆಗೆ ಕರೆ ನೀಡಿದರು.

ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಪರ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪರಿಶಿಷ್ಟರ ಮೀಸಲಾತಿ ಪ್ರಮಾಣ ಹೆಚ್ಚಳ ಹಾಗೂ ಒಳಮೀಸಲಾತಿ ಜಾರಿಗೊಳಿಸುವುದು ಎಂದರೆ ಜೇನು ಗೂಡಿಗೆ ಕೈ ಹಾಕಿದಂತೆ ಎಂದು ಕೆಲವರು ಎಚ್ಚರಿಸಿದ್ದರು. ಆದರೆ ಜೇನು ಕಚ್ಚಿಸಿಕೊಂಡು ಜನರಿಗೆ ಉತ್ತಮ‌ ಕೆಲಸ ಮಾಡಿ ಕೊಡಲಾಗಿದೆ.‌ ಇದಕ್ಕೆ ಜನರು ಖುಷಿ ಇರುವಾಗ, ಕಾಂಗ್ರೆಸ್ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನವರು ಮೀಸಲಾತಿ ಕುರಿತು ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಳ ಮೀಸಲಾತಿ ಹೆಚ್ಚಳ ಕುರಿತು ಮೌನ ವಹಿಸಿದ್ದು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಹಿಂದಿನ ನಡೆ ನೋಡಿದರೆ ಕಾಂಗ್ರೆಸ್ ಎಂದಿಗೂ ಸಾಮಾಜಿಕ ‌ನ್ಯಾಯದ‌ ಪರ ಇರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಲ್ಯಾಣ ‌ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕೇವಲ 1000 ಕೋಟಿ ರೂ ಹಂಚಿಕೆ ಮಾಡಿ ಅದರಲ್ಲಿ ಬರೀ 300 ಕೋಟಿ ಬಿಡುಗಡೆ ಮಾಡಿದ್ದರು. ನಾವು 3000 ಕೋಟಿ ಘೋಷಣೆ ಮಾಡಿ ಅಷ್ಟೂ ಹಣ ಬಿಡುಗಡೆ ಮಾಡಿದ್ದೇವೆ .‌ಇದು ನಿಜವಾದ ಅಭಿವೃದ್ಧಿ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ, ಜಾರ್ಖಂಡ್ ಸಂಸದ ನಿಶಿಕಾಂತ ದುಬೆ, ಶಾಸಕ ಸುಭಾಷ್ ಗುತ್ತೇದಾರ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಾಧ್ಯಕ್ಷ ಅಶೋಕ ಬಗಲಿ, ಅವ್ವಣ್ಣ ಮ್ಯಾಕೇರಿ, ಬಿಜೆಪಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಚಂದಮ್ಮ ಪಾಟೀಲ್, ಮುಖಂಡರಾದ ಶಿವಕಾಂತ ಮಹಾಜನ್ ಸೇರಿದಂತೆ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!