ಕಾನೂನು- ಸುವ್ಯವಸ್ಥೆ ಎಲ್ಲಿ ಹೋಗಿದೆ?: ಸರಕಾರಕ್ಕೆ ಅರಗ ಜ್ಞಾನೇಂದ್ರ ಪ್ರಶ್ನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ರಾಜ್ಯದಲ್ಲಿ ಇಸ್ಪೀಟ್ ದಂಧೆ, ಗಾಂಜಾ ಮತ್ತಿತರ ಮಾದಕವಸ್ತುಗಳ ದಂಧೆ ಹೆಚ್ಚಾಗಿದೆ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಆರೋಪಿಸಿದರು.

ಬೆಳಗಾವಿ ಸುವರ್ಣಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾವತಿಯಲ್ಲಿ ರಕ್ಷಣಾ ವ್ಯವಸ್ಥೆ ಇಲ್ಲವೇ? ಅನೇಕ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ಕಾನೂನು- ಸುವ್ಯವಸ್ಥೆ ಎಲ್ಲಿ ಹೋಗಿದೆ? ಸತ್ತು ಹೋಗಿದೆ ಎಂದು ಸರಕಾರ ಕೈಕಟ್ಟಿ ಕುಳಿತಿದೆಯೇ? ಎಂದು ಪ್ರಶ್ನಿಸಿದ ಅವರು ಇದು ನಾಗರಿಕರ ಆತಂಕ ಎಂದು ಹೇಳಿದರು.

ಭದ್ರಾವತಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಕಬಡ್ಡಿ ಟೂರ್ನಿ ಮಾಡಿದರೆ ಅಲ್ಲಿ ಹಲ್ಲೆ ನಡೆಯುತ್ತದೆ. ಗೋಕುಲ ಅವರ ಊರಿಗೆ ಹೋಗಿ ಬಂದಾಗ ಕಾರನ್ನು ಹಾಳು ಮಾಡಿದ್ದಲ್ಲದೆ ಮರುದಿನ ಅವರ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಭದ್ರಾವತಿಯಲ್ಲಿ ಆಸ್ಪತ್ರೆಗೆ ಸೇರಿಸಿದರೆ ಅವರನ್ನು ಶಿವಮೊಗ್ಗಕ್ಕೆ ಸ್ಥಳಾಂತರ ಮಾಡುವಂಥ ಸ್ಥಿತಿ ಬಂದಿತ್ತು. ಆಸ್ಪತ್ರೆಯಲ್ಲೇ ಮತ್ತೊಮ್ಮೆ ಹಲ್ಲೆ ಮಾಡುವ ಸ್ಥಿತಿ ಬಂದಿತ್ತು ಎಂದು ಆಕ್ಷೇಪಿಸಿದರು.

ಇಷ್ಟೆಲ್ಲ ನಡೆದರೂ ಯಾರನ್ನೂ ಬಂಧಿಸಿಲ್ಲ. ಎಫ್‍ಐಆರ್ ಹಾಕಿದ್ದಾರೆ. ಅಲ್ಲಿನ ಕಾನೂನು- ಸುವ್ಯವಸ್ಥೆ ಸತ್ತುಹೋಗಿದೆ. ಪೊಲೀಸ್ ಇಲಾಖೆ ಸತ್ತಿದೆ ಎಂದು ಟೀಕಿಸಿದರು. ಅಕ್ಟೋಬರ್‍ನಲ್ಲಿ ಒಬ್ಬ ಕಾರ್ಯಕರ್ತರ ಮೇಲೆ ದಾಳಿ ಆಗಿದೆ. ಅವರ ಕಾರ್ಯಚಟುವಟಿಕೆಗೆ ಅಡ್ಡಿ ಆಗುವವರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ದೂರಿದರು.

ವಾಟ್ಸ್ ಆಪ್ ಮೆಸೇಜ್ ರೀಪೋಸ್ಟ್ ಮಾಡಿದ್ದಕ್ಕೆ ಗೋಕುಲ್ ಮೇಲೆ ಹಲ್ಲೆ ಮಾಡಿದ್ದು, ಕಿವಿ ತುಂಡಾಗಿದೆ. ಅನ್ಯಾಯದ ವಿರುದ್ಧ ಮಾತನಾಡಿದರೆ ಹಲ್ಲೆ ಮಾಡುವುದಾದರೆ ಕಾನೂನು ಸುವ್ಯವಸ್ಥೆ ಇದೆ ಎನ್ನಲು ಸಾಧ್ಯವೇ ಎಂದು ಕೇಳಿದರು. ಈ ಕುರಿತು ವಿಧಾನಸೌಧದಲ್ಲಿ ಚರ್ಚೆಗೆ ಪ್ರಯತ್ನ ಮಾಡಿದ್ದೇನೆ ಎಂದರು.

ಹಲ್ಲೆ ಸಂತ್ರಸ್ತನ ಮೇಲೆಯೇ ಅಟ್ರಾಸಿಟಿ ಕೇಸು ಹಾಕಲಾಗುತ್ತಿದೆ. ಇಲಾಖೆ ಇದರಲ್ಲಿ ಒಳಗೊಂಡಿದೆಯೇ ಎಂಬಂತಿದೆ. ಭದ್ರಾವತಿಯಲ್ಲಿ ರಾಜಕಾರಣಿಗಳ ಕುಟುಂಬದವರು ಷಾಮೀಲಾಗಿ ಹಲ್ಲೆ ಕೆಲಸ ನಡೆದಿದೆ. ಪೊಲೀಸ್ ಇಲಾಖೆ ವೈಫಲ್ಯ ಇದರ ಹಿಂದಿದೆ ಎಂದರು. ಅಮಾನತಿಗೆ ಒಳಗಾದ ಪೊಲೀಸರ ಅಮಾನತು ರದ್ದು ಮಾಡಿ ಅವರನ್ನು ಅಲ್ಲಿಗೇ ನಿಯೋಜಿಸುವ ಕಾರ್ಯ ನಡೆದಿದೆ ಎಂದರು.

ಭದ್ರಾವತಿಯ ಕಾಡಿನ ಮಧ್ಯದ ದೊಡ್ಡೇರಿ ದೇವಸ್ಥಾನದ ಸುತ್ತ, ಶಿವಪುರ ದೇವಸ್ಥಾನ, ಸೀತಾರಾಂಪುರ ಕಾಡಿನ ನಡುವೆ ದಂಧೆ ನಡೆದಿದೆ. ಇದು ಅರಣ್ಯ ಇಲಾಖೆ ಗಮನಕ್ಕೆ ಬಂದಿಲ್ಲವೇ ಎಂದು ಕೇಳಿದರು. ಹೊಸಸಿದ್ದಾಪುರ, ಎಂಪಿಎಂ ಅರಣ್ಯ ಪ್ರದೇಶ ಮತ್ತಿತರ ಕಡೆ ಇಂಥ ದಂಧೆ ನಡೆಯುತ್ತಿದೆ. ಡಾ.ಪರಮೇಶ್ವರ್ ಅವರಿಗೆ ಈ ಕುರಿತು ಪತ್ರ ಬರೆದಿದ್ದೇವೆ ಎಂದು ತಿಳಿಸಿದರು. ಮಾರಣಾಂತಿಕ ಹಲ್ಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!