ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿದರು. ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಹಗ್ಗಜಗ್ಗಾಟವನ್ನು ಪ್ರಸ್ತಾಪಿಸಿದ ಮೋದಿ, “ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೋ ಯಾರಿಗೂ ತಿಳಿಯುತ್ತಿಲ್ಲ” ಎಂದು ಲೇವಡಿ ಮಾಡಿದರು. ಸರ್ಕಾರದ ಒಳಗಿನ ಆಂತರಿಕ ಕಚ್ಚಾಟದಿಂದಾಗಿ ಜನಸಾಮಾನ್ಯರ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಅವರು ಟೀಕಿಸಿದರು.
“ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೋ, ಅಲ್ಲೆಲ್ಲ ಸರ್ಕಾರಿ ಖಜಾನೆಯನ್ನು ಲೂಟಿ ಮಾಡುವುದೇ ಅವರ ಮೊದಲ ಆದ್ಯತೆಯಾಗಿರುತ್ತದೆ. ರಾಜಸ್ಥಾನದಲ್ಲಿ ಅಧಿಕಾರಕ್ಕಾಗಿ ನಡೆದ ಕಿತ್ತಾಟವನ್ನು ಇಡೀ ದೇಶ ನೋಡಿದೆ, ಈಗ ಕರ್ನಾಟಕದಲ್ಲೂ ಅದೇ ಇತಿಹಾಸ ಮರುಕಳಿಸುತ್ತಿದೆ,” ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು. ನಾಯಕರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದರೆ, ಜನಸಾಮಾನ್ಯರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಅವರು ವಿಷಾದಿಸಿದರು.
ಬಂಗಾಳದ ಗೆಲುವಿನ ಸಂಭ್ರಮದ ನಡುವೆಯೂ ಕರ್ನಾಟಕದೊಂದಿಗಿನ ತಮ್ಮ ಸಂಬಂಧವನ್ನು ನೆನೆದ ಪ್ರಧಾನಿ, ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ಕನ್ನಡಿಗರ ಶ್ರಮ ಮತ್ತು ತಾಂತ್ರಿಕ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಬೆಂಗಳೂರು ದೇಶದ ಹೆಮ್ಮೆ ಎಂದು ಬಣ್ಣಿಸಿದ ಅವರು, ಅಭಿವೃದ್ಧಿಯ ಪಥದಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರಬೇಕು ಎಂಬ ಆಶಯ ವ್ಯಕ್ತಪಡಿಸಿದರು.



