ಟಿಕೆಟ್ ಸಿಗಲಿ, ಸಿಗದೇ ಇರಲಿ ನಾನು ಪಕ್ಷದ ಜೊತೆ ಇರುತ್ತೇನೆ: ಸಿಪಿ ಯೋಗೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಟಿಕೆಟ್ ಸಿಗಲಿ, ಸಿಗದೇ ಇರಲಿ ನಾನು ಪಕ್ಷದ ಜೊತೆ ಇರುತ್ತೇನೆ ಎಂದು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಬಳಿಕ ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯ ಮುಖಂಡರ ಜೊತೆ ರಾಷ್ಟ್ರೀಯ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಉಪಚುನಾವಣೆ ಬಗ್ಗೆ ಚರ್ಚೆ ಮಾಡಿದ್ದಾರೆ. ಚುನಾವಣೆ ಪ್ರಕಟವಾದ ಮೇಲೆ ಟಿಕೆಟ್ ಬಗ್ಗೆ ತೀರ್ಮಾನ ಆಗುತ್ತದೆ. ನಮ್ಮ ಹೈಕಮಾಂಡ್ ನಾಯಕರು ಹಲವು ಸಲಹೆ, ಸೂಚನೆ ನೀಡಿದ್ದಾರೆ. ಎರಡೂ ಪಕ್ಷದ ಮುಖಂಡರು ಒಟ್ಟಾಗಿ ಚುನಾವಣೆಗೆ ಹೋಗಬೇಕು. ಹಾಗಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿರಬೇಕು ಎಂದರು.

ಕ್ಷೇತ್ರದ ವಿದ್ಯಮಾನದ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದೇನೆ. ಕಾಂಗ್ರೆಸ್ ಈಗಾಗಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತವಾಗಿರುವ ಬಗ್ಗೆಯೂ ದೆಹಲಿ ಪ್ರವಾಸದಲ್ಲಿ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದೇನೆ. ನಾನು ಇಲ್ಲಿ ಆತುರ ಪಡುವ ಅವಶ್ಯಕತೆ ಇಲ್ಲ. ಯಾರೇ ಅಭ್ಯರ್ಥಿ ಆಗಲಿ, ಬೇಗ ತೀರ್ಮಾನ ಆದರೆ ಒಳ್ಳೆಯದು. ಇದು ಉಪಚುನಾವಣೆ ಆಗಿರುವುದರಿಂದ ಇಡೀ ಸರ್ಕಾರ ಚುನಾವಣೆ ಮಾಡುತ್ತದೆ. ಚುನಾವಣೆಯಲ್ಲಿ ಪರೋಕ್ಷವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ನಾವು ಹೋರಾಡಬೇಕಿದೆ. ಎರಡೂ ಪಕ್ಷದ ಹಿರಿಯರು ಆದಷ್ಟು ಬೇಗ ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದರು.

ನೀನು ಆತುರ ಪಡಬೇಡ ಎಂದು ಪಕ್ಷ ಹೇಳಿದೆ. ಹಾಗಾಗಿ ಪಕ್ಷದ ಆದೇಶ ಮೀರಿ ಹೋಗಬಾರದು ಎಂದು ಎನಿಸಿದೆ. ಅತಂತ್ರವಾದ ಕಾಂಗ್ರೆಸ್ ಸರ್ಕಾರ ಏನು ಬೇಕಾದರೂ ಆಗಬಹುದು. ಉಪಚುನಾವಣೆ ಬಳಿಕ ಸರ್ಕಾರ ಇರುತ್ತಾ, ಇರಲ್ವಾ ಎಂದು ಗೊತ್ತಿಲ್ಲ. ಸರ್ಕಾರ ಹಗರಣಗಳಲ್ಲಿ ನಲುಗುತ್ತಿದೆ. ಈ ಸಂದರ್ಭದಲ್ಲಿ ಈ ಚುನಾವಣೆ ಗೆಲ್ಲಬೇಕು ಎನ್ನುವ ಹಠ ಮೈತ್ರಿ ಪಕ್ಷದಲ್ಲಿದೆ. ಹಾಗಾಗಿ ಎರಡೂ ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here