May 23, 2026
Saturday, May 23, 2026
spot_img

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೆಲ್ತ್ ಎಮರ್ಜೆನ್ಸಿ ಘೋಷಣೆ: ಎಬೋಲಾ ತಡೆಗೆ ಕರ್ನಾಟಕದಲ್ಲಿ ಹೈ ಅಲರ್ಟ್!

ಹೊಸದಿಗಂತ ಡಿಜಿಟೆಲ್‌ ಡೆಸ್ಕ್:

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ಮತ್ತು ಉಗಾಂಡಾದಲ್ಲಿ ಉಲ್ಬಣಗೊಂಡಿರುವ ಎಬೋಲಾ ರೋಗದ ಹರಡುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) 2026 ರ ಮೇ 17 ರಂದು “ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ” (PHEIC) ಎಂದು ಘೋಷಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ತೀವ್ರ ನಿಗಾ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಆರೋಗ್ಯ ಇಲಾಖೆಯಿಂದ ಅಧಿಕೃತ ಪ್ರಕಟಣೆ
ಬೆಂಗಳೂರಿನ ರಾಜೀವ್ ಗಾಂಧಿ ಎದೆಯೋಗಗಳ ಸಂಸ್ಥೆಯನ್ನು (RGICD) ಐಸೊಲೇಶನ್ ಕೇಂದ್ರವಾಗಿ ಮತ್ತು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ಕ್ವಾರಂಟೈನ್ ಹಾಗೂ ಚಿಕಿತ್ಸಾ ಕೇಂದ್ರವಾಗಿ ಗುರುತಿಸಲಾಗಿದೆ. ಮಂಗಳೂರಿನಲ್ಲಿ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಅಡಿಯಿರುವೆ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯನ್ನು ಐಸೊಲೇಶನ್ ಹಾಗೂ ಚಿಕಿತ್ಸಾ ಕೇಂದ್ರವಾಗಿ ನಿಯೋಜಿಸಲಾಗಿದೆ.

ಶಂಕಿತ ಎಬೋಲಾ ಪ್ರಕರಣಗಳ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮೂಲಕ ಪುಣೆಯ ಎನ್‌ಐವಿ ಕೇಂದ್ರಕ್ಕೆ ದೃಢೀಕರಣ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಸಾರ್ವಜನಿಕರಿಗೆ ಸಲಹೆ ಮತ್ತು 21 ದಿನಗಳ ನಿಗಾ:

ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು ಮತ್ತು ಆರೋಗ್ಯ ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ತಿಳಿಸಲಾಗಿದೆ.

ಎಬೋಲಾ ಪೀಡಿತ ದೇಶಗಳಿಂದ ಮರಳುವ ವ್ಯಕ್ತಿಗಳು ಭಾರತಕ್ಕೆ ಬಂದ ನಂತರ 21 ದಿನಗಳ ಕಾಲ ಸ್ವಯಂ-ನಿಗಾ ಮತ್ತು ಆರೋಗ್ಯ ವೀಕ್ಷಣೆಗೆ ಒಳಗಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಈ ಅವಧಿಯಲ್ಲಿ ರೋಗದ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಲು ಸೂಚಿಸಲಾಗಿದೆ.

ಭಾರತದಲ್ಲಿ ಸದ್ಯದ ಪರಿಸ್ಥಿತಿ:

ಭಾರತದಲ್ಲಿ ಇದುವರೆಗೆ ಯಾವುದೇ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ಅಂತಾರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರದ ಪ್ರಮಾಣವನ್ನು ಪರಿಗಣಿಸಿ, ಯಾವುದೇ ಸಂಭಾವ್ಯ ಹರಡುವಿಕೆಯನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.

ಇಲಾಖೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು:

ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ, ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (IDSP) ಅಡಿಯಲ್ಲಿ ಶಂಕಿತ ಪ್ರಕರಣಗಳ ಮೇಲಿನ ನಿಗಾವನ್ನು ರಾಜ್ಯವು ಬಲಪಡಿಸಿದೆ. ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಬಿಂದುಗಳೊಂದಿಗೆ (PoEs) ಸಮನ್ವಯವನ್ನು ಹೆಚ್ಚಿಸಲಾಗಿದೆ.

ವಿಶೇಷ ಕ್ವಾರಂಟೈನ್ ಮತ್ತು ಐಸೊಲೇಶನ್ ಸೌಲಭ್ಯಗಳನ್ನು ಗುರುತಿಸಲಾಗಿದೆ ಹಾಗೂ ರೆಫರಲ್ ಆಂಬ್ಯುಲೆನ್ಸ್ ಸೇವೆಗಳನ್ನು ಸನ್ನದ್ಧವಾಗಿಡಲಾಗಿದೆ. ಆರೋಗ್ಯ ಸಿಬ್ಬಂದಿಗೆ ತರಬೇತಿ ಮತ್ತು ಸೋಂಕು ತಡೆಗಟ್ಟುವಿಕೆ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ರಾಜ್ಯಾದ್ಯಂತ ವೈಯಕ್ತಿಕ ರಕ್ಷಣಾ ಸಾಧನಗಳು (PPE ಕಿಟ್‌ಗಳು), ಅಗತ್ಯ ಔಷಧಗಳು ಮತ್ತು ಪ್ರಯೋಗಾಲಯ ಸೌಲಭ್ಯಗಳ ಸಾಕಷ್ಟು ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದ್ದು, ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು (RRTs) ಅಲರ್ಟ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !