ಅಮೇಥಿ, ರಾಯ್‌ಬರೇಲಿಯಲ್ಲಿ ಯಾರು? ಇನ್ನೂ ಅಭ್ಯರ್ಥಿ ಘೋಷಿಸದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಲೋಕಸಭೆ ಚುನಾವಣೆ ಕಾವು ಹೆಚ್ಚುತ್ತಿದ್ದು, ಇದರ ನಡುವೆ ಉತ್ತರ ಪ್ರದೇಶದ ಅಮೇಥಿ (Amethi) ಹಾಗೂ ರಾಯ್‌ಬರೇಲಿಯಲ್ಲಿ (Raebareli) ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಹಾಗೂ ಪ್ರಿಯಾಂಕಾ ವಾದ್ರಾ (Priyanka Vadra) ಸ್ಪರ್ಧೆ ಕುರಿತ ವರದಿಗಳು ಕೇಳಿಬರುತ್ತಲೇ ಇವೆ. ಆದ್ರೆ ಎರಡೂ ಕ್ಷೇತ್ರಗಳಲ್ಲಿ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ.

ಇತ್ತ ಅಮೇಥಿ ಹಾಗೂ ರಾಯ್‌ಬರೇಲಿಯಲ್ಲಿ ಮೇ 17ರಂದು ನಡೆಯುವ ಐದನೇ ಹಂತದ ಮತದಾನದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಸಲು ಇನ್ನೂ ಕೆಲವೇ ಗಂಟೆಗಳು ಬಾಕಿ ಇವೆ. ಇಷ್ಟಾದರೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿಲ್ಲ.

ಈಗಾಗಲೇ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಎರಡನೇ ಬಾರಿ ಸ್ಪರ್ಧಿಸುತ್ತಿದ್ದು, ಏಪ್ರಿಲ್‌ 26ರಂದು ಮತದಾನ ನಡೆದಿದೆ. ಇನ್ನು ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಥವಾ ಅವರ ಪತಿ ರಾಬರ್ಟ್‌ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ರಾಹುಲ್‌ ಗಾಂಧಿ ಅವರು ಅಮೇಥಿಯಿಂದ 2004ರಿಂದಲೂ ಸ್ಪರ್ಧಿಸಿ, ಗೆಲುವು ಸಾಧಿಸುತ್ತಿದ್ದರು. ಆದರೆ, 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಅವರು ಸೋಲನುಭವಿಸಿದ ಕಾರಣ ವಯನಾಡು ಅವರ ಲೋಕಸಭೆ ಕ್ಷೇತ್ರವಾಗಿದೆ. ಈ ಬಾರಿಯೂ ರಾಹುಲ್‌ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ರಾಯ್‌ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರು ಕೂಡ 2004ರಿಂದ ಸ್ಪರ್ಧಿಸುತ್ತಿದ್ದರು. ಇವರು ಈಗ ರಾಜ್ಯಸಭೆಗೆ ಆಯ್ಕೆಯಾದ ಕಾರಣ ರಾಯ್‌ಬರೇಲಿಯಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!