ʼಮಹಾ’ ಮುಖ್ಯಮಂತ್ರಿ ಪಟ್ಟ ಯಾರಿಗೆ? ಫಡ್ನವೀಸ್-ಶಿಂಧೆ ನಡುವೆ ತೀವ್ರ ಪೈಪೋಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ನಂತರ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಿದ್ಧತೆ ಆರಂಭಿಸಿದೆ.

ಇಂದು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಆಯ್ಕೆ ಆಗುವ ಸಾಧ್ಯತೆ ಇದ್ದು, ಮಂಗಳವಾರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ. ನವೆಂಬರ್ 26 ಪ್ರಸಕ್ತ ವಿಧಾನಸಭೆ ಅವಧಿಯ ಕೊನೆಯ ದಿನವಾಗಿರುವುದರಿಂದ ಮಂಗಳವಾರ ಸಂಜೆಯೇ ಮಹಾಯುತಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಬಿಜೆಪಿ ಮತ್ತು ಮಿತ್ರಪಕ್ಷಗಳು ಸೋಮವಾರ ಸಭೆ ಸೇರಿ ಸಿಎಂ ಆಯ್ಕೆಯ ಬಗ್ಗೆ ತಮ್ಮ ನಿರ್ಧಾರವನ್ನು ಅಂತಿಮಗೊಳಿಸಲಿವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಈ ನಡುವೆ ಮೈತ್ರಿಕೂಟದ ಮೂರು ಪಕ್ಷಗಳ ನಾಯಕರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಜಾತಿ ಸಮೀಕರಣ, ಮರಾಠ, ಒಬಿಸಿ ಸಮುದಾಯಗಳನ್ನು ಗಮನದಲ್ಲಿ ಇಟ್ಟುಕೊಂಡ ಹೊಸ ನಾಯಕನ ಅಯ್ಕೆಗೆ ಬಿಜೆಪಿ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ದೇವೇಂದ್ರ ಫಡ್ನವಿಸ್‌ ರೇಸ್‌ನಲ್ಲಿ ಮುಂದಿದ್ದಾರೆ. ಹಾಲಿ ಸಿಎಂ ಏಕನಾಥ್‌ ಶಿಂಧೆ, ಎನ್‌ಸಿಪಿಯ ಅಜಿತ್‌ ಪವಾರ್‌ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಮೈತ್ರಿಕೂಟದಲ್ಲಿ ಅತ್ಯಧಿಕ 133 ಸ್ಥಾನ ಗಳಿಸಿರುವ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಆಗಬೇಕು ಎಂಬುದು ಪಕ್ಷದ ನಾಯಕರಾದಿಯಾಗಿ ಸಂಘ ಪರಿವಾರದ ಆಶಯವಾಗಿದೆ. ದೇವೇಂದ್ರ ಫಡ್ನವಿಸ್‌ ಅವರೇ ಸಿಎಂ ಆಗಲಿ ಎಂಬುದು ಬೆಂಬಲಿಗರ ವಾದವೂ ಆಗಿದೆ. ಆದರೆ, ಮೈತ್ರಿ ಧರ್ಮ, ಜಾತಿ ಸಮೀಕರಣದ ಸಂಕಟಗಳು ಫಡ್ನವಿಸ್‌ಗೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತಿದೆ.

ಮರಾಠ ಸಮುದಾಯದ ಬೆಂಬಲ ಹಿಡಿದಿಟ್ಟುಕೊಳ್ಳಲು ಶಿಂಧೆಯನ್ನೇ ಮುಂದುವರಿಸಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದಲ್ಲಿ, ಫಡ್ನವಿಸ್‌ ಮತ್ತೆ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡಬೇಕಾಗಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ಮತ್ತೊಂದೆಡೆ, ಚುನಾವಣಾ ಆಯೋಗದಿಂದ ನೂತನ ಶಾಸಕರ ಪಟ್ಟಿ ರಾಜ್ಯಪಾಲರಿಗೆ ಸಲ್ಲಿಕೆಯಾಗಿದೆ.

ಒಂದು ವೇಳೆ ಹೊಸ ಸರ್ಕಾರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರನ್ನು ಆಯ್ಕೆ ಮಾಡಿದ್ದೇ ಆದರೆ, ಗೃಹ ಇಲಾಖೆಯನ್ನು ಏಕನಾಥ್ ಶಿಂಧೆಗೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!