ನೋ ಎಂದ ರಾಹುಲ್‌- ಸೋನಿಯಾ, ಪ್ರಿಯಾಂಕಾ ಒಮ್ಮತದ ಆಯ್ಕೆಯಲ್ಲ: ಗಾಂಧಿ ಕುಟುಂಬ ಹೊರತಾದ ನಾಯಕನಿಗೆ ಕೈ ಅಧ್ಯಕ್ಷಗಿರಿ?

ಹೊಸಗಂತ ಡಿಜಿಟಲ್ ಡೆಸ್ಕ್ 
ವಿವಿಧ ಪಕ್ಷಗಳು ಈಗಾಗಲೇ 2024ರ ಲೋಕಸಭಾ ಚುನಾವಣೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದರೆ ಕಾಂಗ್ರೆಸ್‌ ನಲ್ಲಿ ಮುಂದಿನ ಅಧ್ಯಕ್ಷರು ಯಾರೆಂಬ ಗೊಂದಲಗಳು ಬಗೆಹರಿಯುತ್ತಿಲ್ಲ. ಈ ವರ್ಷದ ಆಗಸ್ಟ್‌- ಸೆಪ್ಟೆಂಬರ್‌ ನಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕಾಂಗ್ರೆಸ್‌ ಕಳೆದ ವರ್ಷವೇ ಪ್ರಕಟಿಸಿತ್ತು. ಈ ಸಮಯ ಹತ್ತಿರವಾದಂತೆ ಕಾಂಗ್ರೆಸ್‌ನಲ್ಲಿ ತುರುಸಿನ ಚಟುವಟಿಕೆಗಳು ನಡೆಯುತ್ತಿವೆ.    2019 ರ ಸಾರ್ವತ್ರಿಕ ಚುನಾವಣೆಯ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಹುದ್ದೆ ತ್ಯಜಿಸಿದ್ದ ರಾಹುಲ್ ಗಾಂಧಿ ಮತ್ತೆ ಹುದ್ದೆಯನ್ನು ಒಪ್ಪಿಕೊಳ್ಳುವಂತೆ ಮಾಡುವ ಇತ್ತೀಚಿನ ಪ್ರಯತ್ನಗಳು ಫಲಪ್ರದವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪಕ್ಷದ ಸದಸ್ಯರ ಮನವಿಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಅವರು ತಮಗೆ ಅಧ್ಯಕ್ಷ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂಬ ವಿಚಾರವನ್ನು ದೃಢವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಸಹ ತಮ್ಮ ಆರೋಗ್ಯ ಸಮಸ್ಯೆಯ ಕಾರಣದಿಂದ ಅಧ್ಯಕ್ಷೆ ಹುದ್ದೆಗೆ ಮರಳುವುದನ್ನು ತಿರಸ್ಕರಿಸಿದ್ದಾರೆ. ಇಷ್ಟಾದರೂ ಕಾಂಗ್ರೆಸ್‌ ನಾಯಕರು ಗಾಂಧಿ ಕುಟುಂಬದ ನಾಯಕರಲ್ಲೇ ಒಬ್ಬರನ್ನು ಅಧ್ಯಕ್ಷಗಾದಿಗೆ ಆರಿಸಲು ಉತ್ಸುಕರಾಗಿರುವುದರಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರತ್ತ ಗಮನ ಹರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಪ್ರಿಯಾಂಕಾ ಉಸ್ತುವಾರಿ ಹೊತ್ತುಕೊಂಡಿದ್ದ ಈ ವರ್ಷದ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆ ಎದುರಾದ ವಿನಾಶಕಾರಿ ಸೋಲಿನ ಬಳಿಕ ಹೆಚ್ಚಿನ ಕಾಂಗ್ರೆಸ್ಸಿಗರು ಪ್ರಿಯಾಂಕ ನಾಯಕತ್ವದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
71 ವರ್ಷದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನೆಚ್ಚಿನ ಹೆಸರಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ, ಹೀಗಾದಲ್ಲಿ ಕಾಂಗ್ರೆಸ್‌ 1998 ರಿಂದೀಚೆಗೆ ಮೊದಲ ಬಾರಿಗೆ ಗಾಂಧಿ ಕುಟುಂಬದಿಂದ ಹೊರತಾದ ಅಧ್ಯಕ್ಷರನ್ನು ಕಾಣಲಿದೆ. ಕಾಂಗ್ರೆಸ್ ಅಧ್ಯಕ್ಷರಾಗಿ ಯಾರೇ ಚುನಾಯಿತರಾದರೂ, ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ವಿರುದ್ಧ ಮೂರನೇ ದೊಡ್ಡ  ಘರ್ಷಣೆಯಾಗಿ 2024 ರ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಕಠಿಣ ಕಾರ್ಯವನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್‌ ಈ ಹಿಂದಿನ ಎರಡೂ ಕದನಗಳಲ್ಲಿ ಸೋತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!