ಟಿ20 ವಿಶ್ವಕಪ್ ನಲ್ಲಿ ಆರಂಭಿಕರಾಗಿ ಯಾರು ಕಣಕ್ಕಿಳಿಯುತ್ತಾರೆ?: ರೋಹಿತ್ ಶರ್ಮಾ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯವು ಸೆಪ್ಟೆಂಬರ್ 20ರಂದು ಮೊಹಾಲಿಯಲ್ಲಿ ಆರಂಭವಾಗಲಿದೆ.
ಏಷ್ಯಾಕಪ್ ಟೂರ್ನಿಯಲ್ಲಿ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್‌ ಪಟೇಲ್ ಫಿಟ್ನೆಸ್ ಸಾಬೀತುಪಡಿಸಿ ತಂಡ ಕೂಡಿಕೊಂಡಿದ್ದು, ರೋಹಿತ್ ಶರ್ಮಾ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಇದಕ್ಕೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಆರಂಭಿಕನಾಗಿ ಆಡುವ ಆಯ್ಕೆ ಇರುವುದು ಒಳ್ಳೆಯ ಬೆಳವಣಿಗೆ. ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ ತಂಡದಲ್ಲಿ ಈ ರೀತಿ ಪ್ಲೆಕ್ಸಿಬಿಲಿಟಿ ಇರುವುದು ಒಳ್ಳೆಯ ಲಕ್ಷಣ. ಯಾವುದೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಉತ್ತಮ ಪ್ರದರ್ಶನ ತೋರುವಂತಹ ಆಟಗಾರರು ನಮ್ಮ ತಂಡದಲ್ಲಿದ್ದಾರೆ ಎಂದು ಹೇಳಿದ್ದಾರೆ.
ನಾವು ನಮ್ಮ ತಂಡದ ಆಟಗಾರರ ಶಕ್ತಿ-ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿದ್ದೇವೆ. ಅವರೆಲ್ಲರೂ ತಂಡಕ್ಕೆ ಯಾವ ರೀತಿಯ ಕೊಡುಗೆ ನೀಡಬಲ್ಲರು ಎನ್ನುವುದರ ಅರಿವಿದೆ. ಆರಂಭಿಕ ಆಟಗಾರನಾಗಿ ವಿರಾಟ್ ಕೊಹ್ಲಿಯೂ ನಮ್ಮ ಆಯ್ಕೆಯಲ್ಲೊಬ್ಬರು. ಅದು ನಮ್ಮ ಗಮನದಲ್ಲಿರುತ್ತದೆ. ಈ ಕಾರಣಕ್ಕಾಗಿಯೇ ನಾವು ಮೂರನೇ ಆರಂಭಿಕ ಬ್ಯಾಟರ್ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಐಪಿಎಲ್‌ನಲ್ಲಿ ಅವರು ಆರಂಭಿಕರಾಗಿ ಇನಿಂಗ್ಸ್‌ ಆರಂಭಿಸಿ ಉತ್ತಮ ಪ್ರದರ್ಶನ ತೋರಿದ್ದಾರೆ. ಹೀಗಾಗಿ ಅವರು ಖಂಡಿತವಾಗಿಯೂ ನಮ್ಮ ಆರಂಭಿಕ ಆಟಗಾರರ ಆಯ್ಕೆಯಲ್ಲೊಬ್ಬರಾಗಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಮ್ಮ ತಂಡದ ಮೂರನೇ ಆರಂಭಿಕ ಬ್ಯಾಟರ್ ಆಗಿದ್ದಾರೆ. ಹಾಗೂ ಕೆಲವು ಪಂದ್ಯಗಳಲ್ಲಿ ಅವರು ಆರಂಭಿಕರಾಗಿಯೂ ಕಣಕ್ಕಿಳಿಯಬಹುದು. ಕಳೆದ ಏಷ್ಯಾಕಪ್‌ ಟೂರ್ನಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಿದ ರೀತಿ ಎಲ್ಲರಿಗೂ ಖುಷಿ ಕೊಟ್ಟಿದೆ. ಆದರೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೆ ಎಲ್ ರಾಹುಲ್ ಇನಿಂಗ್ಸ್‌ ಆರಂಭಿಸಲಿದ್ದಾರೆ. ಈ ವಿಚಾರದಲ್ಲಿ ನಾವು ಹೆಚ್ಚು ಪ್ರಯೋಗ ನಡೆಸುವುದಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!