ಇಡೀ ವಿಶ್ವವೇ ಬಯಸುತ್ತಿದೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ:  ಎ.ನಾರಾಯಣಸ್ವಾಮಿ

ಹೊಸದಿಗಂತ ವರದಿ,ಚಿತ್ರದುರ್ಗ : 
ಬಿಜೆಪಿಯ ಹತ್ತು ವರ್ಷಗಳ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಿಳಿಸುವ ಮೂಲಕ ಬಿಜೆಪಿ ಗೆಲ್ಲಿಸಬೇಕು. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಎದುರಿನ ಒಕ್ಕಲಿಗರ ಸಂಘದ ಕಟ್ಟಡದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರಗಳು ವಿಶ್ವದ ಗಮನ ಸೆಳೆದಿವೆ. ಹಾಗಾಗಿ ಇಡೀ ವಿಶ್ವವೇ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು. ಆ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದರು.

ಒಂದು ದೇಶದಲ್ಲಿ ಎರಡು ಧ್ವಜ, ಎರಡು ಸಂವಿಧಾನ ಇರಬಾರದು ಎಂದು ಜನಸಂಘದ ಕೆಲವು ಮಹನೀಯರು ಬಯಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿ ಆ ಮಹನೀಯರ ಕನಸು ನನಸಾಗಿದೆ. ತ್ರಿವಳಿ ತಲಾಕ್ ನಿಷೇಧ, ರಾಜಕೀಯ ಕ್ಷೇತ್ರದಲ್ಲಿ ಶೇಕಡಾ ೩೩ ರಷ್ಟು ಮಹಿಳಾ ಮೀಸಲಾತಿ ನೀಡಿದರು. ಕೋವಿಡ್ ಸಂದರ್ಭದಲ್ಲಿ ಇಡೀ ದೇಶದ ಜನರಿಗೆ ಉಚಿತ ಲಸಿಕೆ ನೀಡಿದರು. ಇಂತಹ ಒಬ್ಬ ಶ್ರೇಷ್ಠ ಪ್ರಧಾನಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುತ್ತಾರೆ. ಈ ಕುರಿತು ಜನಜಾಗತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣದ ಬಗ್ಗೆ ಕಾಂಗ್ರೆಸ್‌ನವರು ಅನೇಕ ಟೀಕೆಗಳನ್ನು ಮಾಡಿದ್ದಾರೆ. ರಾಮ ಮಂದಿರ ಕೇವಲ ದೇವಸ್ಥಾನವಲ್ಲ. ಪ್ರತಿ ಹಿಂದೂವಿನ ಆತ್ಮಗೌರವ ಪ್ರತೀಕ. ಹಾಗಾಗಿ ಬಿಜೆಪಿಯ ಪ್ರತಿ ಕೆಲಸಕ್ಕೂ ಕಾಂಗ್ರೆಸ್‌ನವರು ಟೀಕೆ ಮಾಡುತ್ತಿರುತ್ತಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾಗಲಿ. ಅವರನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು. ಬಿಜೆಪಿ ಕಾರ್ಯಾಲಯ ಬಿಜೆಪಿ ಪಕ್ಷದ ದೇಗುವಿದ್ದಂತೆ. ಬಿಜೆಪಿ ಪಕ್ಷದ ಕಮಾಂಡರ್‌ಗಳು (ಕಾರ್ಯಕರ್ತರು), ಮುಖಂಡರು ಇರುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ಎಲ್ಲ ೨೮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಕೆಲಸ ಮಾಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ,ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ  ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಚಾಲಕ ಲಿಂಗಮೂರ್ತಿ,  ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್‌ಗೌಡ, ಪ್ರೇಮಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!