ಬಿಜೆಪಿಯಲ್ಲಿ ಅಭ್ಯರ್ಥಿಗಳಿಗಿಂತ ಕಮಲ ಚಿಹ್ನೆ ಮುಖ್ಯ: ಎ.ನಾರಾಯಣಸ್ವಾಮಿ

ಹೊಸದಿಗಂತ ವರದಿ,ಚಿತ್ರದುರ್ಗ :

ಬಿಜೆಪಿ ಪಕ್ಷದಲ್ಲಿ ಅಭ್ಯರ್ಥಿಗಳಿಗಿಂತ ಕಮಲ ಚಿಹ್ನೆ ಮುಖ್ಯ. ಇದರ ಮೇಲೆ ಮತವನ್ನು ಕೇಳಬೇಕಿದೆ. ಇಲ್ಲಿ ಕಮಲವನ್ನು ಗೆಲ್ಲಿಸಬೇಕಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಚುನಾವಣೆಗೆ ತರಬೇಕೆಂದು ಯಾವ ಚರ್ಚೆಯೂ ಆಗಿಲ್ಲ. ನಮ್ಮಲ್ಲಿ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಕಮಲ ಚುನಾವಣೆಗೆ ನಿಲ್ಲುತ್ತದೆ. ಕಮಲಕ್ಕೆ ಮತ ಹಾಕಿಸಬೇಕಿದೆ. ರಾಜ್ಯದ ಯಾವುದೇ ಬೂತ್‌ನಲ್ಲಿ ಕಮಲ ಆರಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾದಾರ ಚನ್ನಯ್ಯ ಮಠ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಮಠವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ನಮ್ಮ ಜನಾಂಗದ ಮಠ ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಸಿಮೀತವಾದ ಮಠವಲ್ಲ. ನಮ್ಮ ಮಠ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುವಂತಹ ಮಠವಾಗಬೇಕಿದೆ ಎಂದರು.

ನಮ್ಮ ಮಠ ಇಡೀ ಸಮಾಜಕ್ಕೆ ಎಲ್ಲಾ ಪಕ್ಷ ಮತ್ತು ನಾಗರೀಕರಿಗೂ ಒಂದು ಸಂದೇಶ, ಜಾಗೃತಿ ಮೂಡಿಸುವ ಕೇಂದ್ರವನ್ನಾಗಿ ಮಠವನ್ನು ಸ್ವೀಕಾರ ಮಾಡಲಾಗಿದೆ. ಮಠ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಸಮಾಜಕ್ಕೆ ಜಾಗೃತಿಯನ್ನು ಮೂಡಿಸುವ ಕನಸನ್ನು ಕಾಣಲಾಗುತ್ತಿದೆ. ರಾಜಕೀಯವಾಗಿ ಮಠವನ್ನು ಯಾವುದೇ ಕಾರಣಕ್ಕೂ ಸಹಾ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾರಾಯಣಸ್ವಾಮಿ ಅಧಿಕಾರಕ್ಕಾಗಿ ಬರುವ, ಅಧಿಕಾರಕ್ಕಾಗಿ ಕೆಲಸವನ್ನು ಮಾಡುವ ನಾರಾಯಣಸ್ವಾಮಿ ಅಲ್ಲ. ನಾನು ಬಿಜೆಪಿ ಕಾರ್ಯಕರ್ತ. ಎಲ್ಲಿಂದಲೋ ನಾನು ಇಂಪೋರ್ಟ್ ಆಗಿ ಬಂದವನಲ್ಲ. ಬಿಜೆಪಿ ಕಟ್ಟಿ ಬೆಳಸುವ ಸಿದ್ದಾಂತವನ್ನು ಸ್ವೀಕಾರ ಮಾಡಿಕೊಂಡು ತಳ ಹಂತದಿಂದ ಬೆಳೆದಿರುವ ಕಾರ್ಯಕರ್ತ. ನಮಗೆ ಕಮಲ ಮುಖ್ಯ. ನಾನು ಕಮಲದ ಸಂದೇಶವನ್ನು ಸೇನಾನಿಗಳಾಗಿ ಕೆಲಸ ಮಾಡುವಂತಹ ಕಾರ್ಯಕರ್ತರ ಪಡೆ ನಮ್ಮದು ಎಂದರು.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಪಕ್ಷದ ಶಾಸಕರ ಮೇಲೆ ನಂಬಿಕೆ ಇಲ್ಲದಂತಾಗಿದೆ. ರಾಜ್ಯಸಭಾ ಚುನಾವಣೆಯ ಸೋಲಿನ ಭೀತಿ ಕಾಡುತ್ತಿದೆ. ಇದರಿಂದ ತಮ್ಮ ಶಾಸಕರನ್ನು ರೆಸಾರ್ಟ್‌ಗಳಿಗೆ ಕರೆದ್ಯೂಯುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುತ್ತದೆ ಎಂದು ಮನಗಂಡಿರುವ ಶಿವಕುಮಾರ್, ಬೇರೆ ಪಕ್ಷದವರನ್ನು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ದುಂಬಾಲು ಬಿದ್ದಿದ್ದಾರೆ. ಇದನ್ನು ನೋಡಿದರೆ ಅವರ ಪಕ್ಷದಲ್ಲಿ ಶಾಸಕರ ಮೇಲೆ ಎಷ್ಟು ಹಿಡಿತ ಇದೆ ಎಂದು ಗೊತ್ತಾಗುತ್ತದೆ ಎಂದು ವ್ಯಂಗ್ಯ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!