Tuesday, August 16, 2022

Latest Posts

ಪೌರ ಕಾರ್ಮಿಕರೇಕೆ ಧರಣಿ ಮಾಡ್ತಿದಾರೆ? ಇಲ್ಲಿದೆ ವಿವರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉತ್ತಮ ವೇತನ ಮತ್ತು ಖಾಯಂ ಉದ್ಯೋಗಗಳಿಗೆ ಆಗ್ರಹಿಸಿ ಸಾವಿರಾರು ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಬಿಬಿಎಂಪಿಯ 15 ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯ ತೀವ್ರತೆಯ ನಡುವೆಯೇ ರಾಜ್ಯ ಸರ್ಕಾರವು ಈ ಪೌರ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.

ಬೆಂಗಳೂರು ಒಂದರಲ್ಲೇ ಅಂದಾಜು 1.3 ಕೋಟಿ ಜನಸಂಖ್ಯೆಯಿದ್ದು, ಪೌರಕಾರ್ಮಿಕರ ಪ್ರತಿಭಟನೆ ಎಂದರೆ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ. ನಗರದಲ್ಲಿ ಪ್ರತಿದಿನ ಸುಮಾರು 5,000 ಟನ್‌ಗಳಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯು ಈ ಪ್ರತಿಭಟನೆಯನ್ನು ಆಯೋಜಿಸಿದ್ದು ಅದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೌರಕಾರ್ಮಿಕರ ಸಂಘವು ಸಹ-ಸಂಘಟಕನಾಗಿದೆ ಎನ್ನಲಾಗಿದೆ.

ಈ ಪ್ರತಿಭಟನೆಗೆ ಹಲವು ವಿರೋಧಪಕ್ಷಗಳು ಬೆಂಬಲ ನೀಡಿದ್ದು ಆಮ್‌ ಆದ್ಮಿ ಪಕ್ಷವೂ ಸಾಥ್‌ ನೀಡಿದೆ. “ಪೌರಕಾರ್ಮಿಕರು ಒಂದು ದಿನವೂ ಕೆಲಸ ಮಾಡಲು ನಿರಾಕರಿಸಿದರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಬಣಿಸಿ ಜನ ಮೂಗು ಮುಚ್ಚಿಕೊಳ್ಳಬೇಕಾಗುತ್ತದೆ. ಸ್ವಚ್ಛತೆ, ಗುಡಿಸುವವರು ಸೇರಿದಂತೆ ಸ್ವಚ್ಛತಾ ಕಾರ್ಮಿಕರಿಗೆ ಅತ್ಯಲ್ಪ ವೇತನ ನೀಡುತ್ತಿದ್ದು, ಈ ವೇತನ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅವರ ಉದ್ಯೋಗವನ್ನು ಖಾಯಂಗೊಳಿಸಬೇಕು,” ಎಂದು ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.

ಇನ್ನು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯನವರು ಸರ್ಕಾರವನ್ನು ತೆಗಳಿ ಸರಣಿ ಟ್ವೀಟ್‌ ಮಾಡಿದ್ದು “ನಾನು ಕರ್ನಾಟಕದ ಸಿಎಂ ಆಗಿದ್ದಾಗ 17,000 ಪೌರಕಾರ್ಮಿಕರನ್ನು ಸರ್ಕಾರಿ ನೌಕರರಾಗಿ ಖಾಯಂಗೊಳಿಸಲಾಯಿತು. ಬೆಂಗಳೂರೊಂದರಲ್ಲೇ 11,000ಕ್ಕೂ ಹೆಚ್ಚು ಗುತ್ತಿಗೆ ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಸೇರಿಸಿಕೊಳ್ಳಲಾಗಿದೆ ಮತ್ತು ಅವರಿಗೆ ನೇರವಾಗಿ ಸಂಬಳ ತಲುಪುವಂತೆ ನೋಡಿಕೊಳ್ಳಲಾಗಿದೆ. ನಮ್ಮ ಸರ್ಕಾರವು ಪೌರಕಾರ್ಮಿಕ ವಸತಿ ಗೃಹ ಭಾಗ್ಯ ಯೋಜನೆಯಡಿ 3,165 ಪೌರಕಾರ್ಮಿಕ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸಿದೆ. ಉಳಿದ ಅರ್ಹ ಫಲಾನುಭವಿಗಳಿಗೆ ಇತರ ವಸತಿ ಯೋಜನೆಗಳ ಮೂಲಕ ನಾವು ವಸತಿ ಖಾತ್ರಿಪಡಿಸಿದ್ದೇವೆ ” ಎಂದು ಬರೆದಿದ್ದಾರೆ.

ಈ ಹಿಂದೆ 2018ರಲ್ಲಿ ರಾಹುಲ್‌ ಗಾಂಧಿ ಕೂಡ ಬಿಜೆಪಿ ಸರ್ಕಾರವನ್ನು ಗೇಲಿ ಮಾಡಿದ್ದರು. ದೆಹಲಿಯಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ಕರ್ನಾಟಕದ ಕ್ರಮವನ್ನು ಅನುಸರಿಸುತ್ತೇವೆ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು ಹೊಗಳಿದ ಅವರು “ಅತ್ಯಂತ ಕಷ್ಟಕರವಾದ ಕೆಲಸವನ್ನು ಮಾಡುವ ವ್ಯಕ್ತಿಗೆ ಹೆಚ್ಚಿನ ಪ್ರತಿಫಲವನ್ನು ನೀಡಬೇಕು. ಭಾರತದಲ್ಲಿನ ಸಮಸ್ಯೆಯೆಂದರೆ ಅತ್ಯಂತ ಕಷ್ಟಕರವಾದ ಕೆಲಸವನ್ನು ಮಾಡುವ ವ್ಯಕ್ತಿಗೆ ಪ್ರತಿಫಲವಿಲ್ಲ ಮತ್ತು ಸುಲಭವಾದ ಕೆಲಸವನ್ನು ಮಾಡುವ ವ್ಯಕ್ತಿಗೆ ಪ್ರತಿಫಲವನ್ನು ನೀಡಲಾಗುತ್ತದೆ. ಅದನ್ನೇ ಕಾಂಗ್ರೆಸ್ ಪಕ್ಷ ಬದಲಾಯಿಸಲು ಬಯಸುತ್ತಿದೆ” ಎಂದು ಹೇಳಿದ್ದರು. ಇದೀಗ ವಿಧಾನ ಸಭೆಯ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವ ಸಂದರ್ಭದಲ್ಲಿ ಪ್ರತಿಭಟನೆಗಳು ತಾರಕಕ್ಕೇರಿವೆ.

ಹೆಚ್ಚಿನ ಸುರಕ್ಷತಾ ಪರಿಕರಗಳು ಬೇಕು ಎಂದು ನೈರ್ಮಲ್ಯ ಕಾರ್ಮಿಕರು ಬಹಳ ಹಿಂದಿನಿಂದಲೇ ಆಗ್ರಹಿಸುತ್ತಿದ್ದರು. ಪೌರ ಕಾರ್ಮಿಕರಿಗೆ ಹೆಚ್ಚಿನ ಸುರಕ್ಷತಾ ಸಾಧನಗಳನ್ನು ನೀಡಬೇಕು ಎಂದು ಮೇ ತಿಂಗಳಲ್ಲಿ ಬೇಡಿಕೆಗಳು ಹೆಚ್ಚಾದವು, ಪ್ರತಿಭಟನೆಗಳ ಮಧ್ಯದಲ್ಲೇ ಪೌರಕಾರ್ಮಿಕನೊಬ್ಬನ ಸಾವು ಬೆಂಗಳೂರಿನಲ್ಲಿ ವರದಿಯಾಗಿದೆ.

“ರಾಜ್ಯ ಸರ್ಕಾರವು ನೇರ ಪಾವತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಸೇವೆಗಳನ್ನು ಕ್ರಮಬದ್ಧಗೊಳಿಸುತ್ತದೆ. ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಸಾಮಾಜಿಕ ಭದ್ರತೆ, ವೈದ್ಯಕೀಯ ಸೇವೆ ಮತ್ತು ಸಹಾಯವನ್ನು ವಿಸ್ತರಿಸಲು ನಾವು ಒಪ್ಪಿಕೊಂಡಿದ್ದೇವೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಅಗತ್ಯ ನಿಯಮಗಳನ್ನು ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss